ಅನುದಿನ ಕವನ-೧೦೮೪, ಕವಿ: ಬಸೂ, ಗದಗ, ಕವನದ ಶೀರ್ಷಿಕೆ: ಅವ್ವ

ಅವ್ವ

ಸುಡು ಬಿಸಿಲಿನ ಟಾಯರನ್ನೇ ಕಾಲಿಗೆ ಚಪ್ಪಲಿಯಾಗಿಸಿ ಅಡವಿ ಅಪ್ಪನಿಗೆ ಬುತ್ತಿ ಒಯ್ವಳು ಅವ್ವ
ಹುರುಪಳಿಸುವ ಹುಡಿ ಮಣ್ಣ ಹಾಯ್ದು ಬಗಲಕೂಸಿಗೆ ಹೊಡಮರಳಿ ಹಾಲೂಡಿಸಿದವಳು ಅವ್ವ

ಪಿಸಿದ ಸೀರೆಯನ್ನೇ ತಿರುತಿರುಗಿ ದಿಂಡು ಹಾಕುತ ಬದುಕ ಚಳಿಗೆ ಕೌದಿಯಾದವಳು ಅವ್ವ
ತಿರಸೆಟ್ಟಿ ಗಂಡನ ಒಣಬೈಗುಳ ಮೆತ್ತಿಕೊಳುತ ಒಡಕು ಬೀದಿ ಬೆಳದಿಂಗಳಾಗಿಸಲಿಲ್ಲ ಅವ್ಪ

ಬೆಳ್ಳಿಚುಕ್ಕಿ ಮೂಡುವ ಹೊತ್ತಿಗಾಗಲೇ ತಟ್ಟೆ ರೊಟ್ಟಿ ಬಡೆವ ಸದ್ದಿನಲಿ ಕರಗುವಳು ಅವ್ವ
ಗಂಡ ಎಂಟುಮಕ್ಕಳ ಹೊಟ್ಟೆ ತುಂಬಿಸಲು ಒಲೆ ಆರದಂತೆ ಕನಸು ಪುರಲೆಯಾಗಿಸಿದವಳು ಅವ್ವ

ಬಾವಿ ತೋಡಿ ಒಡ್ಡು ಹೊತ್ತು ಗರಸು ನೆಲದಿ ತೋಟದ ಬೆಳೆ ಕಂಡಾಗ ನಿರಾಳವಾದಳು ಅವ್ವ
ದಿನವಿಡೀ ದೇಹ ತೇದು ಕೋಳಿನಿದ್ದೆ ಮಾಡಿ ತಗಡ ಧಗೆಯಲ್ಲಿ ಭರವಸೆ ಅಡಕಲ ಗಡಿಗಿ ನೇತಿಟ್ಟಳು ಅವ್ವ

ಹಿಂಡು ಎಮ್ಮೆಗಳ ದೊಡ್ಡಿ ಕಟ್ಟಿ ಹಾಲುಮೊಸರು ಮಾರಿ ಓದು ಮಕ್ಕಳ ಪಾಟಿಪುಸ್ತಕ ತಂದುಕೊಟ್ಟವಳು ಅವ್ವ
ರಾಯನ ಹ್ಯಾಂವಕ್ಕೂ ತಾಯಾಗಿ ಒಂಟಿ ಎತ್ತಿನ ಹೆಗಲಾಗಿ ಮಳೆಗಾಲದ ಬಿತ್ತಿಗೆಯಾದವಳು ಅವ್ವ

ಅಪ್ಪನಿಲ್ಲದ ಹೊತ್ತು ದಣಿದ ಮಧ್ಯಾಹ್ನದ ಬೆವರಿದ್ದರೂ ಪಡಾ ಹೊಲಗಳಿಗೆಲ್ಲ ಬೀಜ ಕಾಣಿಸಿದಳು ಅವ್ವ
ಮಳಿ ಗುಳೆ ಕಟ್ಟಿದಾಗಲೂ ಉಪವಾಸ ಹೊಸ್ತಿಲಾಚೆ ಇಟ್ಟು ಅವನ ಬೆರಳ ಬೀಡಿಯಾಗಿ ಸಣ್ಣಗಾದವಳು ಅವ್ವ

ವಯಸ್ಸು ಎಪ್ಪತ್ತಾದರೂ ಕಾಡುವ ಎದೆಗೂಡಿನ ರೋಗಕ್ಕೆ ಬಗ್ಗದೆ ಮೊಮ್ಮಗಳ ಕಣ್ಣ ಬೆಳಕಾದಳು ಅವ್ವ
‘ಬಸು’ ನಿನ ಹರಿದ ಚೊಣ್ಣ ಹೊಲೆದು ಬಿದ್ದಾಗ ಎತ್ತಿ ಅಗದಿ ನಡೆನುಡಿ ತಿಕ್ಕಿ ಕವನವಾಗಿಸಿದವಳು ಅವ್ವ


-ಬಸೂ(ಬಸವರಾಜ ಸೂಳಿಬಾವಿ), ಗದಗ
—–