ಅನುದಿನ ಕವನ-೧೦೮೫, ಕವಿ: ಅಕ್ಕಿ‌ ಬಸವೇಶ, ಹಗರಿಬೊಮ್ಮನಹಳ್ಳಿ, ಕವನದ ಶೀರ್ಷಿಕೆ: ನಾವು ಕಾಯುತ್ತಿದ್ದೆವೆ….

ರಾಜ್ಯದ 430 ಸರಕಾರಿ ಪ್ರಥಮದರ್ಜೆ ಕಾಲೇಜುಗಳ
10600 ಅತಿಥಿ ಉಪನ್ಯಾಸಕರು ತಮ್ಮ ನ್ಯಾಯಯುತ ಬೇಡಿಕೆಯಾಗಿರುವ ‘ಸೇವಾ ಖಾಯಮಾತಿ’ಗಾಗಿ ಆಗ್ರಹಿಸಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ತಿಂಗಳತ್ತ ಸಾಗಿದೆ.
ಈ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರು ಆಗಿರುವ ಕವಿ ಅಕ್ಕಿ ಬಸವೇಶ ಅವರು ಕವಿತೆ ಮೂಲಕ ಅತಿಥಿ ಉಪನ್ಯಾಸಕರ ವೇದನೆ, ಮನವಿಯನ್ನು ದಾಖಲಿಸಿದ್ದಾರೆ. ಇದು ರಾಜ್ಯದ ಮುಖ್ಯಮಂತ್ರಿಗಳು, ಉನ್ನತ ಶಿಕ್ಷಣ ಸಚಿವರು ಮತ್ತು ಶಿಕ್ಷಣ ಪ್ರೇಮಿಗಳಿಗೂ ತಲುಪಲಿ ಎನ್ನುವ ಆಶಯ ಕವಿ ಜತೆ ಕರ್ನಾಟಕ ಕಹಳೆ ಡಾಟ್ ಕಾಮ್ ದೂ ಕೂಡಾ!
(ಸಂಪಾದಕರು)🍀👇

ನಾವು ಕಾಯುತ್ತಿದ್ದೇವೆ….

ನಾವು ಕಾಯುತ್ತಿದ್ದೇವೆ
‘ಅತಿಥಿ’ ಎಂಬ ಅಮಾನವೀಯ ಹಣೆಪಟ್ಟಿಯನ್ನು
ಕಿತ್ತು ಬಿಸಾಡುವುದಕ್ಕಾಗಿ
ಬೌದ್ಧಿಕ ವಲಯದ ಈ ಜೀತಪದ್ಧತಿಯಿಂದ
ಮುಕ್ತಿ ಪಡೆಯುವುದಕ್ಕಾಗಿ

ಸಮಾನ ಕೆಲಸದ ಜೊತೆ
ಸಮಾನ ವೇತನ ಪಡೆಯುವುದಕ್ಕಾಗಿ
ಸಮಾನರ ಜೊತೆ ಸಮಾಜದಲ್ಲಿ
ಗೌರವದ ಬದುಕನ್ನು ಬದುಕುವುದಕ್ಕಾಗಿ

ಚಿಂದಿಯಾಗಿರುವ ಕನಸುಗಳ
ಮತ್ತೆ ಚೆಂದಗೊಳಿಸುವುದಕ್ಕಾಗಿ
ಆರಿಹೋದ ಭರವಸೆಗಳ
ಹಣತೆ ಮರಳಿ ಹಚ್ಚುವುದಕ್ಕಾಗಿ

ನಮ್ಮ ಬದುಕನ್ನೇ ಮುಡುಪಿಟ್ಟು
ನಾವು ಕಾಯುತ್ತಿರುವುದು
ಬರಿ ನಿನ್ನೆ ಮೊನ್ನೆಗಳಿಂದಲ್ಲ,
ನಾವು ಕಾಯುತ್ತಿದ್ದೇವೆ
ಹತ್ತು ಹಲವು ವರ್ಷಗಳಿಂದ
ಎಣೆಯಿಲ್ಲದ ಸಂಯಮದಿಂದ
ಕೊನೆಯಿಲ್ಲದ ಅರ್ಹತೆಗಳಿಂದ

“ನಾವು ಕಾಯುತ್ತಿದ್ದೇವೆ
ಭೂಮಿಗೆ ಬಿದ್ದ ಬೀಜ
ಎದೆಗೆ ಬಿದ್ದ ಅಕ್ಷರ
ಇಂದಲ್ಲ ನಾಳೆ ಫಲ ಕೊಡುವುದು” ಎಂಬ
ಈ ನೆಲದ ನೆಲಮೂಲ ನಂಬಿಕೆಯಿಂದ

ನಾವು ಕಾಯುತ್ತಿದ್ದೇವೆ
“ಅರಿವನ್ನು ಹಂಚುವುದೇ ಧರ್ಮ,
ಅದನ್ನು ತಡೆಯುವುದು ಅಧರ್ಮ”
ಎಂಬ ಕವಿಪಂಪನ ಇಂಪಿನ ಆದರ್ಶದಿಂದ

ಹೇಗೋ ಕಾಯುತ್ತಿದ್ದಾರೆಂದು
ನೀವು ಇನ್ನೂ ಕಾಯಿಸಬೇಡಿ
ನೊಂದ ಜೀವಗಳನ್ನೇ
ಮತ್ತೆ ಮತ್ತೆ ನೊಯಿಸಬೇಡಿ

ಆದಷ್ಟು ಬೇಗ
ನಮಗೆ ನ್ಯಾಯಕೊಡಿ
ಅತಿಥಿ ಉಪನ್ಯಾಸಕರ ಸೇವೆ ಖಾಯಂ ಮಾಡಿಬಿಡಿ
ಸೇವೆ ಖಾಯಂ ಮಾಡಿಬಿಡಿ…


-ಡಾ.ಅಕ್ಕಿ.ಬಸವೇಶ
ಅತಿಥಿ ಉಪನ್ಯಾಸಕರು,  ಹಗರಿಬೊಮ್ಮನಹಳ್ಳಿ, ವಿಜಯನಗರ ಜಿಲ್ಲೆ.