ಅನುದಿನ ಕವನ-೧೦೮೬, ಕವಿ: ಡಾ. ನಿಂಗಪ್ಪ ಮುದೇನೂರು, ಧಾರವಾಡ, ಕವನದ ಶೀರ್ಷಿಕೆ:ನನ್ನ ಪ್ರಿಯ ತುಂಗಭದ್ರೆಯೇ!

ನನ್ನ ಪ್ರಿಯ ತುಂಗಭದ್ರೆಯೇ!

ಪ್ರಿಯ ತುಂಗಭದ್ರೆಯೇ
ಹರಿವ ನಿನ್ನೊಡಲೊಳಗೆ
ಇಳಿದ ಕಂದಮ್ಮರಿಗೆ
ಯಾವ ಮುತ್ತು ರತ್ನಗಳ ನೀಡಿದೆ

ಬೇಡುವ ಭಕ್ತರ
ಆಕಾಶಕ್ಕೆ ಏಣಿ ಹಾಕುವವರ
ಮಡಿಗೊಂಡವರ
ಕಣ್ಣಿಗಿಳಿದೆಯಾ ತಾಯಿ

ಒಡಲೇ ಕಲ್ಲಾದವರ
ಲಯವಾದವರ
ಕೋಟೆ ಪರ್ವತವಾದವರ ದನಿಗೆ ಇಂಬಾದೆಯಾ…
ನಿನ್ನ ಸಿಹಿ ಒಡಲಲ್ಲಿ ಸಿಕ್ಕ ಪುಡಿ ಕಾಸಿಗೆ
ಈ ಮಕ್ಕಳ ಒಡಲು ತಣಿದೀತೇ

‘ಎಲ್ಲಾರು ಮಾಡುವುದು ಹೊಟ್ಟೆಗಾಗಿ’
ದಾಸರೇನೋ ಹಾಡಿದರು
ನೀನೂ ಅವರ ಕೊರಳ ಮಂಟಪಕೆ
ದನಿಯಾದೆ
ತಂಬೂರಿಯೂ ಆದೆ

ಇವರೋ ಕಾಸು ಎಸೆಯುವ ಕೈಗಳಿಗಾಗಿಯೇ
ನಿತ್ಯ ಕಾಯಬೇಕು
ಅವರ ದಾರಿಗೂ ಕನಸುಣಿಯಾಗಬೇಕು
ತಮ್ಮ ತಂಗಿಯರ ಅಕ್ಷರಕೆ ಕಾಸುಕೂಡಿಸಬೇಕು!

ನೀವೇನೋ ಕೂಡಿ ಹರಿದಿರಿ
ಸಮುದ್ರವೂ ಆದಿರಿ
ಈ ಮಕ್ಕಳ ನಾಳೆಗಳಿಗೆ ತಾಯಿಯಾಗುವವರು
ಯಾರು?
ಒಡಲ ತಾಗಿರುವ
ಹೆಬ್ಬಂಡೆಗಳ ಕರಗಿಸುವ ಶಿಲ್ಪಿಯಾಗುವವರು
ಯಾರು?


-ಡಾ.ನಿಂಗಪ್ಪ ಮುದೇನೂರು, ಧಾರವಾಡ

ತುಂಗಭದ್ರೆಯ ಚಿತ್ರ ಸೌಜನ್ಯ: ಪ್ರೊ.ಡಿ.ವಿ.ಪರಮಶಿವಮೂರ್ತಿ, ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ,ಹಂಪಿ

*****