ಕಾವ್ಯ ಕಹಳೆ, ಕವಿಯಿತ್ರಿ-ಶೋಭ ಮಲ್ಕಿಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ: ಅನ್ನದಾತ

ಭೂಮಿ ತಾಯಿಯ ನಂಬಿ ವ್ಯವಸಾಯ ಮಾಡುತ್ತಿರುವ ದೇಶದ ಬೆನ್ನೆಲುಬು ರೈತ ಬಂಧುಗಳಿಗೆಲ್ಲಾ  ರೈತ ದಿನಾಚರಣೆಯ ಶುಭಾಶಯಗಳು.

ಅನ್ನದಾತ

ದೇಶದ ಬೆನ್ನೆಲುಬೇ ರೈತ
ಎಲ್ಲರ ಉದರವ ಪೊರೆವ ಅನ್ನದಾತ
ದಣಿವನರಿಯದೇ ಖುಷಿಯನರಸುವಾತ
ಅವನೇ ಭೂತಾಯಿಯ ಪ್ರೀತಿಯ ಸುತ ||

ಅತಿವೃಷ್ಟಿ‌ ಅನಾವೃಷ್ಟಿಯ ತಾಪಕ್ಕೆ ಸಿಕ್ಕರೂ
ನೇಗಿಲ ಯೋಗಿಯ ಕೂಗು ಕೇಳುವವರು ಯಾರು ?
ಸಮಯಕ್ಕೆ ಸರಿಯಾಗಿ ಸಿಕ್ಕಲಿ ಬೀಜ ಗೊಬ್ಬರ
ರೈತನ ಬೆಳೆಗೆ ಸಿಗಬೇಕು ನಿಗದಿತವಾದ ದರ ||

ಒಂದ್ಹೊತ್ತಿನ ಊಟಕ್ಕೂ ಇನ್ನಿಲ್ಲದ ಹೋರಾಟ
ಮಳೆರಾಯ ಆಡುವ ಕಣ್ಣಾ ಮುಚ್ಚಾಲೆ ಆಟ
ಕಷ್ಟಗಳು ಒಟ್ಟೊಟ್ಟಿಗೆ ಬಂದರೂ ಬಿಡದು ಹಟ
ಕೃಷಿಕ ಕುಗ್ಗದೇ ಹೆಜ್ಜೆಯನ್ನಿಡುವ ದಿಟ ||

“ಬಡವನ ಕೋಪ ದವಡೆಗೆ ಮೂಲ”
ಅತಿಯಾದ ಬಡತನಕ್ಕೆ ಸಾಲವೇ ಶೂಲ
ಸೋಲಿಗೆ ಸಾವೊಂದೇ ಪರಿಹಾರವಲ್ಲ
ನಿನ್ನ ಬಿಟ್ಟರೆ ನಂಬಿದವರಿಗೆ ಜಗವಿಲ್ಲ ||

ದುಡಿಮೆಗೆ ಸಿಗುತ್ತಿಲ್ಲ ಸೂಕ್ತ ಬೆಂಬಲದ ಬೆಲೆ
ಅಹೋರಾತ್ರಿ ದುಡಿದರೂ ಕ್ಷಣ ಕ್ಷಣಕ್ಕೂ ಸವಾಲೆ
ಮತ್ತೆ ಸಿಕ್ಕಿತೆಂಬ ಬದುಕಿಗೆ ಭರವಸೆ ನಾಳೆ
ಸರ್ಕಾರ ಕಣ್ತೆರೆದರೆ ಮಾತ್ರ ನೆಮ್ಮದಿಯ ನೆಲೆ ||


-ಶೋಭಾ ಮಲ್ಕಿ ಒಡೆಯರ್, ಹೂವಿನ ಹಡಗಲಿ