ಈಗೀಗ ಸೂರ್ಯನೂ ಲೇಟ್ ಲತೀಫನಾಗಿದ್ದಾನೆ! ಚಳಿಗೆ ಅವನೂ ವುಲನ್ ಬ್ಲಾಂಕೆಟ್ ಹೊದ್ದು ಮಲಗಿದ್ದಾನೋ, ಏನೋ! ಬೆಳಗ್ಗೆ ಏಳು ಗಂಟೆಯಾಯಿತೆಂದರೆ ಲೋಕದ ಸಮಸ್ತ ಚಟುವಟಿಕೆಗಳೂ ಶುರುವಾಗಿಬಿಡುತ್ತವೆ. ಮೊಬೈಲ್ ರಿಂಗಣಿಸಲಾರಂಭಿಸುತ್ತದೆ. ಅದಕ್ಕೆ ಮುನ್ನವೇ ನಾನು ವಾಕಿಂಗ್ ಮುಗಿಸಬೇಕು. ಅತ್ಯಂತ ಖಾಸಗಿ ಮತ್ತು ಏಕಾಂತದ ಕ್ಷಣಗಳು, ತಾಜಾತನದ ಮತ್ತು ಧ್ಯಾನದ ಕ್ಷಣಗಳೆಂದರೆ ಸೂರ್ಯೋದಯಕ್ಕೆ ಮುನ್ನದ ಅಮೃತ ಗಳಿಗೆಗಳು. ಅವು ಅತ್ಯಂತ ಅಮೂಲ್ಯ ಕ್ಷಣಗಳು. ಅವುಗಳನ್ನು ಕಳೆದುಕೊಂಡ ಮನುಷ್ಯ, ಇಡೀ ದಿನ ಅವುಗಳಿಗಾಗಿ ಹುಡುಕುತ್ತಿರುತ್ತಾನಂತೆ!
ಇಂದು(ಡಿ.25) ಬೆಳಿಗ್ಗೆ ಎದ್ದಾಗ ಐದೂವರೆ ಆಗಿತ್ತು. ವಾಕಿಂಗ್ ಮಾಡಿ ಬಂದು ಬಿಡೋಣ ಅಂತ ಬೈಕಲ್ಲಿ ಹೋಗಿ ವಾಕಿಂಗ್ ಲೇಔಟನ್ನ ತಲುಪಿದೆ. ಯಾರೊಬ್ಬರ ಸುಳಿವೂ ಇಲ್ಲ. ನಾನೇನಾದರೂ ಕನ್ಫ್ಯೂಸ್ ಆಗಿ ನಟ್ಟಿರುಳ ರಾತ್ರಿಯಲ್ಲಿ ಹೀಗೆ ವಾಕಿಂಗಿಗೆ ಬಂದುಬಿಟ್ಟೆನೆ! ನಾನು ಹೀಗೆ ಇಲ್ಲಿ ಬಿರುಸಾಗಿ ವಾಕಿಂಗ್ ಮಾಡುವುದನ್ನು ನೋಡಿದರೆ ಭೂತ ಪ್ರೇತ ಎಂದು ಯಾರಾದರೂ ಹೆದರಿಕೊಂಡುಬಿಟ್ಟರೆ! ಹೀಗೆ ಹೊಸಪೇಟೆಯಿಂದ ಹಂಪಿಗೆ ಅದೆಷ್ಟೋ ಸಲ ನಾಲ್ಕು ಗಂಟೆಗೇ ಎದ್ದು ಹೋದದ್ದಿದೆ. ಮನೆಯಿಂದ ಹೊರಟೆನೆಂದರೆ ಬೈಕ್ ನಿಲ್ಲುತ್ತಿದ್ದುದೇ ಹಂಪಿಯ ಕೃಷ್ಣ ಮಂದಿರದ ಮುಂದೆ. ಅಷ್ಟು ಕಾರ್ಗತ್ತಲ ರಾತ್ರಿಯಲ್ಲಿ, ಬೀಸುವ ತಂಪು ಗಾಳಿಯಲ್ಲಿ ಅಲ್ಲಿಗೆ ಹೇಗೆ ಬಂದು ತಲುಪಿದೆನೋ ಎಂದು ನಾನು ಅಚ್ಚರಿಗೊಂಡದ್ದೂ ಉಂಟು. ಕೃಷ್ಣ ಮಂದಿರದ ಮುಂದಿರುವ ಪುರಾತನ ಕೊಳದ ಮೆಟ್ಟಿಲುಗಳ ಮೇಲೆ ಕಾಲು ಚಾಚಿ ಕುಳಿತು ಸೂರ್ಯೋದಯವನ್ನು ವೀಕ್ಷಿಸುವ ಅನುಭವ, ಆ ಕೃಷ್ಣದೇವರಾಯನಿಗೂ ದಕ್ಕಿತೋ ಇಲ್ಲವೋ! ಹಂಪಿಯಲ್ಲಿ ಮಂಜಾವವೆಂದರೆ ಅದ್ಭುತ, ಅವಿಸ್ಮರಣೀಯ!
ಊರ ಹೊರವಲಯದ ಹೊಸ ಲೇಔಟ್ ಗಳು ವಾಕಿಂಗ್‍ಗೆ ಹೇಳಿ ಮಾಡಿಸಿದ ತಾಣಗಳು. ಮೊಬೈಲ್ ನಲ್ಲಿ ಸಮಯ ನೋಡಿಕೊಂಡೆ. 5.40 ಆಗಿತ್ತು. ಈಗ ಸೂರ್ಯೋದಯ ಆಗುವುದೇ ಆರು ನಲವತ್ತಕ್ಕೆ. 20 ನಿಮಿಷ ಬೀದಿ ದೀಪಗಳ ಕೆಳಗೆ ವಾಕಿಂಗ್ ಮಾಡುತ್ತಿದ್ದಂತೆ, ಆಕಾಶದಲ್ಲಿ ಬೆಳಕು ಗೋಚರವಾಗತೊಡಗಿತ್ತು. ಇವತ್ತು ಹೊಗೆ ಮಂಜು ಕವಿದಿತ್ತು. ದೆಹಲಿಯಲ್ಲಿ ಇದು ಸಾಮಾನ್ಯ. ಆದರೆ ಬಳ್ಳಾರಿಯಲ್ಲಿ ಅಪರೂಪವೇ. ಒಂದು ತಾಸಿಗೂ ಹೆಚ್ಚು ಕಾಲ ವಾಕಿಂಗ್ ಮಾಡಿದೆ. ನನ್ನ ಪೆಡೊಮೀಟರ್ ಆಪ್ 6 ಕಿ.ಮೀ ತೋರಿಸಿತು. ಮುಂಜಾನೆಯ ಮಧುರ ಕ್ಷಣಗಳು, ದಿನದ ಸಾರ್ಥಕತೆಗೆ ಮುನ್ನುಡಿ ಬರೆಯುತ್ತವೆ. ಮುಂಜಾನೆಯನ್ನ ಯಾವತ್ತೂ ಮಿಸ್ ಮಾಡಿಕೊಳ್ಳಬೇಡಿ ❤
-ಪ್ರೊ.ಎಸ್.ಎಂ ಶಶಿಧರ್, ಬಳ್ಳಾರಿ
🌄🚴♂️🌅💚☘️✨🚶♂️
ತಮ್ಮ ಪ್ರೀತಿ, ಅಭಿಮಾನಗಳಿಗೆ ಋಣಿ. ಧನ್ಯವಾದಗಳು ಸರ್ 🤝☺️