ಗಜ಼ಲ್
ಎದೆಯ ನೋವುಗಳ ಸುಮ್ಮನೆ ನುಂಗಿಕೋ ಇಲ್ಲಿ ಕೇಳುವ ಕಿವಿಗಳು ಕಡಿಮೆ
ಕಣ್ಣೀರು ಕೆನ್ನೆಗೆ ಜಾರದಂತೆ ನೋಡಿಕೋ ಇಲ್ಲಿ ಒರೆಸುವ ಕೈಗಳು ಕಡಿಮೆ
ಅವರವರದೇ ದುಃಖ ಎತ್ತಲಾರದಷ್ಟು ಭಾರವಾಗಿದೆ ಗೆಳೆಯ
ತುಟಿಗಳು ತೆರೆಯದಂತೆ ಬಿಗಿ ಹಿಡಿದುಕೋ ಇಲ್ಲಿ ಕರಗುವ ಜೀವಗಳು ಕಡಿಮೆ
ನಿನ್ನ ಯಾತನೆಯ ಬುತ್ತಿ ನೀನೊಬ್ಬನೇ ಉಣ್ಣಬೇಕು ಕಮ್ಮಗೆ
ಹಂಚಿ ತಿನ್ನುವ ಹಂಬಲ ಯಾಕೋ ಇಲ್ಲಿ ಹಂಚಿಕೊಳ್ಳುವ ಹೃದಯಗಳು ಕಡಿಮೆ
ಇದಿರಾಗುವ ಎಲ್ಲರ ಬಳಿ ಗೋಳು ಹೇಳಿಕೊಂಡು ತಿರುಗಬೇಡ ಮಿತ್ರ
ಸಂತೈಕೆ ಸಿಗುವುದಿಲ್ಲ ತಿಳಿದುಕೋ ಇಲ್ಲಿ ನೇವರಿಸುವ ಮನಸುಗಳು ಕಡಿಮೆ
ನಿನ್ನ ಬದುಕಿನ ಶಿಲುಬೆ ನೀನೊಬ್ಬನೇ ಹೊರಬೇಕು ‘ನಾಗೇಶಿ’
ಇನ್ನೊಬ್ಬರ ಹೆಗಲ ನಿರೀಕ್ಷೆ ಸಾಕೋ ಇಲ್ಲಿ ಭಾರ ಹೊರುವ ಹೆಗಲುಗಳು ಕಡಿಮೆ
-ನಾಗೇಶ್ ಜೆ ನಾಯಕ, ಸವದತ್ತಿ
*****