ಅನುದಿನ ಕವನ-೧೦೯೫, ಕವಿ: ಎ.ಎನ್. ರಮೇಶ, ಗುಬ್ಬಿ, ವರ್ಷಾಂತ್ಯದ ಚಿತ್ರ: ಶಿವಶಂಕರ ಬಣಗಾರ, ಹೊಸಪೇಟೆ

“ಇದು ವರ್ಷದ ಕಡೆಯ ದಿನದ ಹನಿಗಳು. ಡಿಸೆಂಬರ್ 31 ರಂದು ನಮ್ಮ ನಿಮ್ಮೆಲ್ಲರ ಆಂತರ್ಯದಿ ಮಾರ್ದನಿಸುವ ದನಿಗಳು. ವರ್ಷಾಂತ್ಯದ ದಿನ ನಮ್ಮೊಳಗೆ ಉಂಟಾಗುವ ತಲ್ಲಣ, ರಿಂಗಣ, ಸಂಘರ್ಷ, ಉತ್ಕರ್ಷ, ವೇದನೆ, ಶೋಧನೆ ಎಲ್ಲವುಗಳ ಅಭಿವ್ಯಕ್ತಿಯೇ ಈ ಹನಿಗವಿತೆಗಳು. ನನ್ನ ನಿಮ್ಮ ಎದೆಯ ಸಂವೇದನೆಗಳ ಭಾಷ್ಯರೂಪವೇ ಈ ಆರು ಭಾವಪ್ರಣತೆಗಳು ಅಂತಾರೆ” ಕವಿ ಎ.ಎನ್.ರಮೇಶ್.ಗುಬ್ಬಿ ಅವರು! 🍀👇

1. ಮುವ್ವತ್ತೊಂದು..!

ಡಿಸೆಂಬರ್ ಮುವ್ವತೊಂದು ಎಂದರೆ
ಹಳೆಯ ನೆನಪುಗಳಿಗೆ ವಿದಾಯ ಬೆನ್ನುಡಿ
ಹೊಸ ಕನಸುಗಳಿಗೆ ಭರವಸೆ ಮುನ್ನುಡಿ.!

2. ಹರಣ.!

ಕ್ಯಾಲೆಂಡರ್ ಪುಟಗಳ
ತಿರುವಿ ಹಾಕುವುದರಲ್ಲೇ
ಮುಗಿದು ಹೋಯ್ತು ವರ್ಷ
ನೀಡದೆ ತೀಡದೆ ಬದುಕಿಗೆ
ಏನೊಂದೂ ನವ ಸ್ಪರ್ಷ.!

3. ಭ್ರಮೆ..!

ಆಗಲಿಲ್ಲ ಈ ವರ್ಷದಾರಂಭದಂದು
ಅಂದುಕೊಂಡ ಏನೊಂದು ಕಾಯಕಲ್ಪ
ನಾಳೆಯಿಂದ ಹೊಸವರ್ಷಕೆ ಮತ್ತದೇ
ಕನಸು ಕಾಯಕಗಳ ಹೊಸ ಸಂಕಲ್ಪ.!

4. ಪರಿ-ವರ್ತನೆ.!

ನಾಳೆಯಿಂದ ಬದಲಾಗುತ್ತದೆ ಕ್ಯಾಲೆಂಡರು
ದಿನಚರಿ ಪುಸ್ತಕ ದಿನಾಂಕ ವರ್ಷದ ಮೊಹರು
ಮಿಕ್ಕಿದ್ದೆಲ್ಲ ಮತ್ತದೇ ಪ್ರತಿನಿತ್ಯದ ಕಾರುಬಾರು.!

5. ಸಂಕಲ್ಪ.!

ಭರವಸೆಯಿಡುತ ಹೊಸವರ್ಷ ದರ್ಪಣದಿ
ಬಿಡೋಣ ಹಳೆವರ್ಷದ ನೋವಿಗೆ ತರ್ಪಣ
ಹೊಮ್ಮಲಿ ಹೃನ್ಮನದಿ ನವೋತ್ಸಾಹದ ರಿಂಗಣ.!

6. ಪಡ್ಡೆಗಳಾಚರಣೆ.!

ಸಂಜೆಯಿಂದ ರಾತ್ರಿ ಹನ್ನೆರಡರ ತನಕ
ಮದಿರೆಯ ಗುಕ್ಕು ಗುಕ್ಕಿಗೂ ಬಿಕ್ಕುತ್ತಾ
ಹಳೆವರ್ಷಕೆ ಕೋರುವರು ವಿದಾಯ.!
ರಾತ್ರಿ ಹನ್ನೆರಡರ ನಂತರ ಬೆಳತನಕ
ಶೀಷೆ ಕುಕ್ಕುತ್ತಾ ಉನ್ಮತ್ತರಾಗಿ ಉಕ್ಕುತ್ತಾ
ಹೊಸವರ್ಷಕೆ ಮಾಡ್ವರು ಸ್ವಾಗತನೃತ್ಯ.!-

-ಎ.ಎನ್. ರಮೇಶ್, ಗುಬ್ಬಿ