ಅನುದಿನ ಕವನ-೧೦೯೬, ಕವಿ: ಪ್ರವರ, ಕೊಟ್ಟೂರು

ಬಗಲಿನಲ್ಲಿ ಖಾಲಿ ಚೀಲ
ಬರೆಯಲೊಂದು ಪೆನ್ನು ಹಾಳೆ
ಕವಿಯು ನಿದಿರೆ ಹೋದ ಜಾಗ
ಮೊಬ್ಬು ಬೆಳಕ ಮದಿರೆಶಾಲೆ

ರಾತ್ರಿಯೊಡಲ ಸೀಳಿದಂತೆ
ಬುರುಗು ಮಡಕೆ ತುಂಬಿದಂತೆ
ಮೋಡ ದಾಟಿ ಬಂದ ಚಂದ್ರ
ಬೆಳಕ ಎಸೆದ ಬಾಚುವಂತೆ

ಕಿಡಕಿಯಿಂದ ಇಳಿದ ಬೆಳಕು
ಪುಸ್ತಕದ ನಡುವೆ ಇಣುಕಿ
ಹತ್ತಾರು ಪುಟವ ತಿರುವಿ
ಕವಿತೆಯೊಂದ ಹುಡುಕಿತು
ಪ್ರೀತಿಯಿಂದ ತಿವಿಯಿತು

ಪಾಪ ಕವಿತೆ, ಕನಸ ನಡುವೆ
ಯಾರದೋ ಸಾಂಗತ್ಯದಲ್ಲಿ,
ಪ್ರೇಯಸಿಯ ಸಾನಿಧ್ಯದಲ್ಲಿ
ಲೋಕದ ಪರಿವಿಲ್ಲದೇ
ಬೆತ್ತಲಾಗಿ ಮಲಗಿತ್ತು,
ಮೈಯ ತುಂಬಾ ಬೆವರಿತ್ತು

ಎಂಥ ನಿದಿರೆ ಎಂಥ ಕನಸು
ಮಾಟಗಾತಿ ಕೈಯ ತಿನಿಸು
ಸಗ್ಗವಿತ್ತು ಪಕ್ಕದಲ್ಲೆ
ಹಾಳುಗೆಡವಿಟ್ಟೆಯಲ್ಲೆ
ಬೆಳಕೆ ನಿನಗೆ ಹೊಟ್ಟೆಕಿಚ್ಚು
ಇಂಥ ಸುಖವಿಲ್ಲವೆಂದು
ಬೆವರಿನಾಟ ಸಿಕ್ಕದೆಂದು

ನಾನು ಬೆಳಕು ನೀನು ಕವಿತೆ
ಕತ್ತಲಲ್ಲೂ ಬತ್ತದೊರತೆ
ನೋವ ಬಿರಡೆ ಬಿಚ್ಚಿದವರ
ಬೇಸರವನೆ ಹೊಚ್ಚಿದವರ
ಹಂಚಿಕೊಳ್ಳೊ ಹೆಗಲು ತಾನೆ
ಸೋತು ನೆಲವ ಕಚ್ಚಿದವರ

ಹಿಡಿಯಬೇಡ ಕವಿಯ ದಾರಿ
ಲೋಲುಪತೆಯ ಮಿಡಿವ ಹೋರಿ
ಶೋಕಿಗಾಗಿ ಬರೆವ ಪದ್ಯ
ವೀರ್ಯದಂತೆ, ಪದವ ಸ್ಖಲಿಸಿ

ಅಗೋ ಅತ್ತ ದಿಕ್ಕ ನೋಡು
ಹೆಜ್ಜೆಯಿಕ್ಕಿ ಮುಂದೆ ಸಾಗು
ದಾಟಬೇಕು ಬೆಟ್ಟ ಬಯಲು
ಹುಡುಕಬೇಕು ಹಾಡಿನೊಡಲು

ನೀನು ಕವಿತೆ ನೀನು ಜೋಗಿ
ಹೆಸರಿಲ್ಲದ ಕಾಡ ಸುರಗಿ
ಗಾಳಿ ಕುದುರೆ ಏರಿಬಿಡು
ಜೋಳಿಗೆನು ಹಾರಿಬಿಡು

ಹಾಡನುಡುಕಿ ಹೊರಟ ಕವಿತೆ
ನಗರ ಮೈಯ ದಾಟಿದೆ
ಬೇಲಿಯಿತ್ತು, ಗಡಿಯು ಇತ್ತು
ಅವು ಬರಿಯ ಮಾತಿಗೆ

-ಪ್ರವರ, ಕೊಟ್ಟೂರು
—–