ಎಲ್ಲ ಕಡೆ ತಿರುಗಿದೆ ಪ್ರೀತಿಗಾಗಿ
ಹಿಡಿಯಷ್ಟು ಖುಷಿಗಾಗಿ
ಬಾಗಿಲು ಬಡಿಯುತ್ತ…
ತೆರೆದ ಬಾಗಿಲ ಹಿಂದೆ
ಎಲ್ಲೆಡೆ ಇದ್ದದ್ದು ಬರೀ ನೋವು
ಅವರದೇ ಗೋಳಿನ ಕಥೆ.
ಅಳು ಇಲ್ಲದ
ನೋವು ಕೇಳಿಸದ ಬಾಗಿಲನ್ನು
ನಾನೇ ಆಯ್ಕೆ ಮಾಡಿಕೊಂಡು
ಅಲ್ಲಿ ನಿಂತೆ…
ಬಾಗಿಲು ತೆರೆಯಿತು
ಅವಳು ಒಳಕರೆದು
ಇರಿ, ಇಲ್ಲಿ ತುಸು ಹೊತ್ತು ಎಂದಳು:
ಎರಡು ಹಗಲು
ಎರಡು ರಾತ್ರಿ ಅವಳ
ಜೊತೆಯಲ್ಲಿದ್ದೆ.
ಅವಳಲ್ಲಿದ್ದ ಎಲ್ಲ ಪ್ರೀತಿಯನ್ನು
ನನಗೆ ಬಡಿಸಿದಳು.
ಎರಡನೆ ದಿನದ ಬೆಳಿಗ್ಗೆ
ನಾನು ಹೊರಟು
ನಿಂತಾಗ, ಅವಳು ಇಲ್ಲಿಯೇ ಇರಿ
ಎಂದು ಹೇಳಲಿಲ್ಲ….
ಅಲ್ಲೊಂದು ಬಿಳಿ ಹೂ
ಮಂಜು ಸುರಿವ
ಆಕಾಶದ ಕೆಳಗೆ ನಿಧಾನವಾಗಿ
ಕಣ್ಬಿಡುತ್ತಿತ್ತು….
ನನ್ನ ಜೊತೆ ನೀನು
ಇರಬಹುದಿತ್ತು
ಎಂದು ಯಾರೋ ಹೇಳಿದ ಹಾಗೆ
ಕೇಳಿಸಿತು…
-ಎಂ.ಎಸ್. ರುದ್ರೇಶ್ವರಸ್ವಾಮಿ, ಬೆಂಗಳೂರು
—–