ಅನುದಿನ ಕವನ-೧೧೦೩, ಕವಿ: ಸಿದ್ಧರಾಮ ಕೂಡ್ಲಿಗಿ, ವಿಜಯನಗರ ಜಿ.

ಅವಳು……………

ಅವಳ ಪ್ರೇಮದಲ್ಲೂ ಅದೆಂಥ ಶಕ್ತಿ
ಸಾಗರದಾಳದಲ್ಲಿ ತೆಪ್ಪಗೆ ಬಿದ್ದಿದ್ದ
ಕಪ್ಪೆಚಿಪ್ಪಿನಲ್ಲೂ ಮುತ್ತನ್ನು
ರೂಪಿಸುವ ಶಕ್ತಿ…………….

ಬೆಟ್ಟದ ಮೇಲೆ ತಣ್ಣಗೆ ಹರಿಯುತ್ತಿದ್ದ
ಒರತೆಯನ್ನು ನದಿಯಾಗಿಸಿ
ಸಾಗರವನ್ನು ಸೇರುವಂತೆ ಮಾಡುವ ಶಕ್ತಿ………

ಬೆಟ್ಟದ ತುದಿಯಲ್ಲಿನ ಒಂಟಿಮರದಲ್ಲೂ
ಹಸಿರುಕ್ಕಿಸಿ ಹೂವರಳಿಸಿ ನಗಿಸುವ ಶಕ್ತಿ………….

ಆಗಸದಿ ದು:ಖದಿ ಅಂಡಲೆಯುತ್ತಿದ್ದ ಒಂಟಿ ಮೋಡದಲ್ಲಿ
ಸುರಿವ ಪ್ರೇಮದ ಹನಿಗಳಿವೆ ಎಂದು ತೋರಿದ ಶಕ್ತಿ………..

ತೆಪ್ಪಗೆ ಬಿದ್ದಿದ್ದ ಒಂಟಿ ದಾರಿಯ
ಇಕ್ಕೆಲಗಳಲ್ಲೂ ಹಸಿರಿದೆ, ಹೂವಿದೆ
ಎಂದು ತೋರಿದ ಶಕ್ತಿ………………..

ಅವಳಿರುವುದೇ ಹಾಗೆ……….
” ಅವಳು ” ಎಂದರೇ ಒಂದು ಶಕ್ತಿ


-ಸಿದ್ಧರಾಮ ಕೂಡ್ಲಿಗಿ
—–