ಅನುದಿನ ಕವನ-೧೧೦೪, ಕವಿ: ಲೋಕೇಶ್ ಮನ್ವಿತಾ, ಬೆಂಗಳೂರು, ಕವನದ ಶೀರ್ಷಿಕೆ: ಗಾಯಗೊಂಡ ಸಾಲುಗಳು

” ಗಾಯಗೊಂಡ ಸಾಲುಗಳು ”
ಗಾಯಗೊಳ್ಳುತ್ತಲೆ ಇವೆ
ಮುಲಾಮು ಹಚ್ಚುವ
ಬೆರಳಿಗೆಲ್ಲೋ ತಡಕಾಟ

ಕನಿಷ್ಟ ಅರಿವು ಇರದೆ
ಹಾಗೇ ಉಳಿದಿರುವ
ದಿವ್ಯ ನಿರ್ಲಕ್ಷ್ಯದ ಬಗ್ಗೆ
ನನಗೆ ಇತ್ತೀಚಿಗೆ ಕರುಣೆ

ನಡೆಯುವಾಗ
ಹೆಜ್ಜೆಗಳು ಪಕ್ಕಕ್ಕೆ
ಸರಿದಾಗಲೇ
ತಿಳಿಯಬೇಕಿತ್ತು.

ನಂಬಿಕೆಯ
ಊರುಗೋಲಿಗೆ
ಕತ್ತನ್ನು ಬಿಗಿದುಕೊಂಡವನಿಗೆ
ಅಂದ ಪ್ರೀತಿ

ಸ್ಥಾನಪಲ್ಲಟಗೊಂಡ
ಮನದಲ್ಲೀಗ
ಅವನಷ್ಟೇ
ಅವನಿಗಷ್ಟೇ ಧ್ಯಾನ

ನೋವು ಹಿಂಸೆ ನರಕಯಾತನೆ
ಇರುಳ ಒಂಟಿತನ
ನನ್ನನ್ನೇ ತಿಂದುಕೊಳ್ಳುತ್ತಿರುವುದು
ಅದೆಷ್ಟು ಸರಿಯೋ?

ಗಾಯಗೊಂಡ ಸಾಲುಗಳು
ಮತ್ತೇ ಮತ್ತೇ ನನ್ನಿಂದಲೇ
ಗಾಯಗೊಳ್ಳುತ್ತಿವೆ
ಎನಿಸುತ್ತಿದೆ
ನಂಬಿಕೆಯ ಕುತ್ತನ್ನು
ಭರಿಸಿಕೊಳ್ಳುವ
ದಾರಿ ಅರಿಯದೆ

-ಲೋಕೇಶ್ ಮನ್ವಿತಾ, ಬೆಂಗಳೂರು
(ಮೊದಲ ಸಾಲುಗಳು
ಕವಿ ಸದಾಶಿವ ಸೊರಟೂರು )
—–