ಸುರಕ್ಷತಾ ಕ್ರಮಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು -ಡಾ.ಎಚ್.ಕೆ ಮಂಜುನಾಥ್ ರೆಡ್ಡಿ

ಬಳ್ಳಾರಿ, ಜ.11: ರಸ್ತೆ ಸುರಕ್ಷತಾ ಕ್ರಮಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದು ನಗರದ ಎಸ್.ಎಸ್.ಎ (ಶ್ರೀಮತಿ ಸರಳ ದೇವಿ ಸತೀಶ್ ಚಂದ್ರ ಅಗರ್ ವಾಲ್) ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.‌ಎಚ್.ಕೆ. ಮಂಜುನಾಥ್ ಅವರು ಹೇಳಿದರು.
ಕಾಲೇಜಿನ ಆವರಣದಲ್ಲಿ ಗುರುವಾರ ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆ ಮತ್ತು ಕಾಲೇಜಿನ ಸ್ಕೌಟ್ಸ್ ಅಂಡ್ ಗೈಡ್ಸ್ ನ ರೋವರ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಚಾರಿ ನಿಯಮಗಳನ್ನು ಪಾಲಿಸಿದರೆ ಯಾವುದೇ ಅಪಘಾತಗಳು‌ ಸಂಭವಿಸುವುದಿಲ್ಲ. ಚಾಲನೆ ಮಾಡುವಾಗ ನಿರ್ಲಕ್ಷ್ಯ ಸಲ್ಲ ಎಂದು ತಿಳಿಸಿದರು.
ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಅಯ್ಯನಗೌಡ ಪಾಟೀಲ್ ಅವರು ಮಾತನಾಡಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕ್ರಮಗಳನ್ನು ಪ್ರತಿಯೊಬ್ಬರು ಜಾಗರೂಕತೆಯಿಂದ ಅನುಸರಿಸಿ ತಮ್ಮ ಜೀವನವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಚಾರಿ ನಿಯಮದ ಕಾನೂನು ನಿಯಮಗಳನ್ನು ಕೂಲಂಕುಶವಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಮನಮುಟ್ಟುವ ರೀತಿಯಲ್ಲಿ ಸರಳವಾಗಿ ವಿವರಿಸಿದರು.
ರಸ್ತೆ ಸುರಕ್ಷತಾ ಸಪ್ತಾಹ ಜ. 11ರಿಂದ 17ರವರೆಗೆ ನಡೆಯುವುದು. ಸಪ್ತಾಹದಲ್ಲಿ ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಯ
ಜಿಲ್ಲಾ ಕಾರ್ಯದರ್ಶಿ ವಿಜಯಸಿಂಹ,
ಜಿಲ್ಲಾ ಖಜಾಂಚಿ ಪ್ರಭಾಕರ್,
ಜಿಲ್ಲಾ ತರಬೇತಿ ಆಯುಕ್ತ ನಾಗರಾಜ್, ಜಿಲ್ಲಾ ತರಬೇತಿ ಆಯುಕ್ತ ಮಹಮ್ಮದ್ ಬಾಷಾ, ನೆಹರು ಯುವ ಕೇಂದ್ರ ಜಿಲ್ಲಾ ಸಮನ್ವಯ ಅಧಿಕಾರಿ ಮೌಂಟ್ ಪತ್ತರ್, ಸಂಚಾರಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಶಫಿವುಲ್ಲಾ, ಕಾಲೇಜಿನ ಸ್ಕೌಟ್ಸ್ ಅಂಡ್ ಗೈಡ್ಸ್ ನ ರೋವರ್ಸ್ ಸಂಚಾಲಕರಾದ
ಪ್ರೊ. ರಾಮಾಂಜನೇಯ, ಪ್ರೊ. ಎನ್ ಗಂಟೆಪ್ಪಶೆಟ್ಟಿ, ಪ್ರೊ. ಬಿ ರಾಮಸ್ವಾಮಿ, ರೇಂಜರ್ಸ್ ಸಂಚಾಲಕರಾದ ಡಾ. ಶೋಭಾರಾಣಿ, ಡಾ. ಪಲ್ಲವಿ, ಡಾ. ಸಲಿಯ ಮತ್ತು ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಸಪ್ತಾಹ ಜಾಗೃತಿ: ಕಾಲೇಜಿನಿಂದ ಸಂಚಾರಿ ಪೊಲೀಸ್ ಠಾಣೆ ವರೆಗೆ ರಸ್ತೆ ಸುರಕ್ಷತಾ ಸಪ್ತಾಹದ ಜಾಗೃತಿ ಮೂಡಿಸುವ ಜಾಥಾ ಸಾಗಿತು.ಕಾರ್ಯಕ್ರಮದಲ್ಲಿ ಶ್ರೀಮೇಧಾ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
—–