ಬಳ್ಳಾರಿ: ಗ್ರಾಮ ಪಂಚಾಯತಿಯ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆ ಅಬಕಾರಿ ಇಲಾಖೆ ಅಬಕಾರಿ ಇಲಾಖೆ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಸಿರಗುಪ್ಪ ತಾಲೂಕಿನ ನಾಡಂಗ ಮತ್ತು ವೆಂಕಟಾಪುರ ಗ್ರಾಮಗಳ ಮಧ್ಯದಲ್ಲಿ ಬರುವ ನಾಳಾ ಹತ್ತಿರ ಅನುಮಾನಸ್ಪದವಾಗಿ ನಿಂತಿದ್ದ ಒಂದು ಲಾರಿ ಹಾಗೂ ಒಂದು ಟ್ರಾಕ್ಟರ್ ಪರಿಶೀಲನೆ ನಡೆಸಿದ್ದು, ಅಕ್ರಮ ಮದ್ಯ ಮತ್ತು ವಾಹನಗಳು(35,12,900 ರೂ.ಗಳು) ವಶಪಡಿಸಿಕೊಳ್ಳಲಾಗಿದ್ದು,ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಹೊಸಪೇಟೆ ಅಬಕಾರಿ ಜಂಟಿ ಆಯುಕ್ತ ಎಲ್.ಮೋಹನಕುಮಾರ್, ಬಳ್ಳಾರಿ ಅಬಕಾರಿ ಉಪ ಆಯುಕ್ತ ನರೇಂದ್ರಕುಮಾರ್ ಅವರ ಆದೇಶದ ಮೇರೆಗೆ ಅಬಕಾರಿ ನಿರೀಕ್ಷಕರಾದ ತುಕಾರಾಂ ನಾಯ್ಕ್,ಪಿ.ಗಿರೀಶ್ ಮತ್ತು ಸಿಬ್ಬಂದಿಗಳಾದ ಸಿ.ದಕ್ಷಿಣಾಮೂರ್ತಿ ಮತ್ತು ಹರೀಶಸಿಂಗ್ ಅವರು ಮಂಗಳವಾರ ಸಂಜೆ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಗಸ್ತು ನಡೆಸುತ್ತಿರುವಾಗ ಸಿರುಗುಪ್ಪ ತಾಲೂಕಿನ ನಾಡಂಗ ಮತ್ತು ವೆಂಕಟಾಪುರ ಗ್ರಾಮಗಳ ಮದ್ಯದಲ್ಲಿ ಬರುವ ನಾಳಾ ಹತ್ತಿರ ಅನುಮಾನಸ್ಪದವಾಗಿ ಒಂದು ಲಾರಿ ಹಾಗೂ ಒಂದು ಟ್ರಾಕ್ಟರ್ ನಿಂತಿದ್ದು ಕಂಡುಬಂದಿತ್ತು.ಈ ಲಾರಿ ಮತ್ತು ಟ್ರಾಕ್ಟರ್ ಪರಿಶೀಲಿಸಲಾಗಿ ಲಾರಿಯು ರಹದಾರಿ ಪರವಾನಿಗೆ ಹೊಂದಿದೆ. ಸದರಿ ಲಾರಿ ಮತ್ತು ಟ್ರಾಕ್ಟರ್ ನಲ್ಲಿರುವ ಮದ್ಯದ ಪೆಟ್ಟಿಗೆಗಳನ್ನು ಏಣಿಕೆ ಮಾಡಲಾಗಿ ಲಾರಿಯಲ್ಲಿ ರಹದಾರಿ ಪತ್ರದಲ್ಲಿರುವ ಮದ್ಯಕ್ಕಿಂತ 103.68 ಲೀ (90 ಮಿಲಿಯ ಒ.ಸಿ ವಿಸ್ಕಿಯ 12 ಪೆಟ್ಟಿಗೆಗಳು) ಮದ್ಯವು ಹೆಚ್ಚಿರುವುದು ಹಾಗೂ ಟ್ರಾಕ್ಟರ್ ನಲ್ಲಿ ಪರವಾನಿಗೆ ಇಲ್ಲದೇ 241.92 ಲೀ (90 ಮಿಲಿಯ ಒ.ಸಿ ವಿಸ್ಕಿಯ 28 ಪೆಟ್ಟಿಗೆಗಳು) ಒಟ್ಟು 345.60 ಲೀ ಅಕ್ರಮ ಮದ್ಯ ಕಂಡುಬಂದಿದೆ.
ಒಟ್ಟು ಜಪ್ತು ಮಾಡಿಕೊಂಡ ಮದ್ಯದ ವಿವರ: ವಿವಿಧ ಬ್ರಾಂಡ್ ಹಾಗೂ ಅಳತೆಯ ಒಟ್ಟು 4982.400 ಲೀ (574 ಪೆಟ್ಟಿಗೆಗಳು) ಮದ್ಯ, 8.640 ಲೀ (1 ಪೆಟ್ಟಿಗೆ) ವೈನ್,495.240 ಲೀ(58 ಪೆಟ್ಟಿಗೆಗಳು) ಬೀಯರ್, ಲಾರಿ ಮತ್ತು ಟ್ರ್ಯಾಕ್ಟರ್ ಹಾಗೂ ಟ್ರಾಲಿ.
ಕೃತ್ಯ ನಡೆದ ಸ್ಥಳದಲ್ಲಿದ್ದ ಮುದ್ದೆಮಾಲು ಹಾಗೂ ವಾಹನಗಳನ್ನು ಮತ್ತು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಮದ್ಯ ಹಾಗೂ ವಾಹನಗಳ ಅಂದಾಜು ಮೌಲ್ಯ ರೂ. 35,12,900 ಗಳಾಗಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.