ಕನಸುಗಳ ಕೋಟೆ ಉರುಳಿಸಿ…
ಬಡವನೆದೆಯಲ್ಲಿ
ನಗುವರಳಿಸಿದ ಹೂವೆ
ನಿಮ್ಮ ಕನಸುಗಳೆ ಈಗಾ
ಬಲಿತವರಿಂದ ಬಾಡುತ್ತಿವೆ…
ಸಿಕ್ಕಿದ ಅಧಿಕಾರವ
ಅನ್ಯರ ಕಾಲಕೆಳಗಿಟ್ಟು
ನೆಪಮಾತ್ರ ನಿಮ್ಮ ಪೂಜಿಪ
ಮೀಸಲು ಫಲಾನುಭವಿಗಳೆ
ನಿಮ್ಮ ಕನಸುಗಳ ಕೋಟೆ ಉರುಳಿಸಿ
ಮಹಲ ಮೇಲೆ ಮಹಲು ಕಟ್ಟಿ
ಮೆರೆಯುತ್ತ ಗುಲಾಮಗಿರಿಗೆ ನಿಂತು
ನಿಮ್ಮ ಪ್ರಬುದ್ದ ಭಾರತದ ಕನಸಿಗೆ
ಕೊಳ್ಳಿ ಇಡುತ್ತಿದ್ದಾರೆ…
ನಿಮ್ಮ ಹೋರಾಟದ ಕಿಚ್ಚು
ಇಲ್ಲದ ಇವರು
ನಿಮ್ಮ ಶ್ರಮದ ನೆರಳಿನಲ್ಲಿ ನಿಂತು
ನಮ್ಮ ಜನರ ಮತ್ತೆ ಜೀತಕ್ಕೆ ತಳ್ಳುತ್ತಿದ್ದಾರೆ
ದೇವರ ಹೆಸರಿನಲ್ಲಿ
ಆಣೆ ಪ್ರಮಾಣ ಮಾಡುತ್ತಿದ್ದಾರೆ
ಮನೆಮನೆ ಸುತ್ತಿ ಉರುಳು ಸೇವೆ ಮಾಡುತ್ತಿದ್ದಾರೆ
ಅಧಿಕಾರದ ದುಶ್ಚಟಕ್ಕೆ ಬಿದ್ದು
ಲಾಬಿಗೆ ನಿಂತಿದ್ದಾರೆ
ಒಂದೊಂದು ಮನೆಯಲ್ಲಿ ಜೀತಕ್ಕಿದ್ದು
ತಮ್ಮ ಕಾಲ ತಾವೇ ಎಳೆದುಕೊಂಡು
ಗೋಮುಖ ವ್ಯಾಘ್ರಗಳಂತೆ
ನಮ್ಮ ಜನರ ಮೇಲೆ ಎರಗುತ್ತಿದ್ದಾರೆ
ಅಧಿಕಾರದ ಮೂಟೆ ಹೊತ್ತು
ನಿಮ್ಮ ಕನಸಿಗೆ ಬೆಂಕಿ ಇಟ್ಟು
ನಿಮ್ಮ ಹೆಸರೇಳಿಕೊಂಡು
ನಮ್ಮ ಜನರ ಮೋಸಗೊಳಿಸುತ್ತಿದ್ದಾರೆ…
-ಸಿದ್ದುಜನ್ನೂರ್, ಚಾಮರಾಜ ನಗರ
—–