ಅನುದಿನ ಕವನ-೧೧೧೨, ಕವಿ: ಡಾ.ಅಕ್ಕಿ ಬಸವೇಶ, ಹಗರಿಬೊಮ್ಮನಹಳ್ಳಿ

ಎಷ್ಟೊಂದು ಹೂವುಗಳನ್ನಿಟ್ಟಿರಿ ನೀವು               ಸಿಕ್ಕಸಿಕ್ಕವರ ಕಿವಿಗಳಲ್ಲಿ                                      ನೀವಿಟ್ಟ ಹೂವುಗಳೆಲ್ಲ                                    ಎಷ್ಟೊಂದು ದುಬಾರಿ                                          ಇದಕ್ಕಾಗಿ ತಾವು ನಡೆಸಿದ ತಯಾರಿ,ಪಿತೂರಿ!

ಎಷ್ಟೊಂದು ಹೂವುಗಳನ್ನಿಟ್ಟಿರಿ ನೀವು
ಬಿತ್ತದೆ,ಬೆಳೆಯದೆ
ಕೊನೆಗೆ ಕನಿಷ್ಟ ಮಾರುಕಟ್ಟೆಯಲ್ಲಿ ಕೊಳ್ಳದೆ!
ಹೂವಿಡುವ ಈ ನಿಮ್ಮ ಘನಕಾರ್ಯಕ್ಕೆ
ನಿಮ್ಮ ಬದುಕನ್ನೇ ಮುಡುಪಿಟ್ಟಿರಿ
ನಂಬಿದ್ದ ಸಿದ್ಧಾಂತವನ್ನೇ ಬಲಿಕೊಟ್ಟಿರಿ!!

ಹೀಗೆ ಎಷ್ಟು ಹೂವಿಡುತ್ತೀರಿ ನೀವು
ಅಂದು ಅವರಿಗೆ
ಇಂದು ಇವರಿಗೆ
ನಿಮಗಾಗಿ ನಿಮ್ಮ ಸುತ್ತ ನೊಂದು-ಬೆಂದವರಿಗೆ
ಪಾಪ
ಭೇದ ತೋರಲೇ ಇಲ್ಲ ಬಿಡಿ
ಹೂವಿಡುವ ನಿಮ್ಮ ಸತ್ಕಾರ್ಯದಲ್ಲಿ

ಬಹುಶ:
ನೀವು ಮರೆತಿರಬೇಕು
ದೇವರಿಗೆ ಹೂವು ಇಡುವುದನ್ನು
ಆದರೆ
ದೇವರು ಮಾತ್ರ ಏನನ್ನೂ ಮರೆಯಲಾರ
ಎಲ್ಲರ ಕಿವಿಯಲ್ಲಿ ಇಟ್ಟ
ನಿಮ್ಮ ಒಂದೊಂದೇ ಹೂವುಗಳನ್ನು
ಒಟ್ಟಾಗಿ ಪೋಣಿಸಿ
ನಿಮಗೆ ಹಾರಮಾಡಿ ಹಾಕುವುದನ್ನು!!
ಅಂದು ಬಹುಶಃ ನೀವು
ಹೂವಿನಲ್ಲೇ ಮುಚ್ಚಿ ಹೋಗಿರುತ್ತೀರಿ.
ಕಾರಣ
ಹೂ ಇಡುವವರ ಸರತಿ ಸಾಲಿನಲ್ಲಿ
ಆದಿನ ನೀವಿರುವುದಿಲ್ಲ !!


– ಡಾ.ಅಕ್ಕಿ ಬಸವೇಶ, ಹಗರಿಬೊಮ್ಮನಹಳ್ಳಿ
—–