ಬೆಂಗಳೂರು, ಜ. 18: ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಗೌರವಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಗುರುವಾರ ಲಾಲ್ ಬಾಗ್ ನ ಗಾಜಿನ ಮನೆಯಲ್ಲಿ ವಿಶ್ವಗುರು ಬಸವಣ್ಣ ಮತ್ತು ವಚನ ಸಾಹಿತ್ಯಾಧಾರಿತ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ 2024 ಉದ್ಘಾಟಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಸವಣ್ಣನವರ ಹೆಸರು ಚಿರಸ್ಥಾಯಿಯಾಗಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದರು.
ಅಲ್ಲಮಪ್ರಭು ಉದ್ಯಾನವನ: ಶಿವಮೊಗ್ಗದಲ್ಲಿರುವ ಜೈಲಿನ 46 ಎಕರೆ ಪ್ರದೇಶದಲ್ಲಿ ಉದ್ಯಾನವನಕ್ಕೆ ಅಲ್ಲಮಪ್ರಭು ಉದ್ಯಾನವನ ಎಂದು ನಾಮಕರಣ ಮಾಡಲು ತೀರ್ಮಾನಿಸಲಾಗಿದೆ. ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿ ಶಿಕಾರಿಪುರದವರಾದ್ದರಿಂದ ಅವರ ಹೆಸರನ್ನೂ ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಈ ತೀರ್ಮಾನ ಮಾಡಲಾಗಿದೆ ಎಂದರು.
ತೋಟಗಾರಿಕೆ ಇಲಾಖೆಯವರು ಬೆಳೆಯುವ ಹೂ, ಹಣ್ಣುಗಳು,ಇಲಾಖೆಯಲ್ಲಿ ಆಗಿರುವ ಬೆಳವಣಿಗೆಗಳನ್ನು ಜನರಿಗೆ ಪರಿಚಯಿಸುವ ಕಾರ್ಯಕ್ರಮ ಇದು ಎಂದ ಮುಖ್ಯಮಂತ್ರಿಗಳು ತೋಟಗಾರಿಕೆ ಇಲಾಖೆಗೆ ಧನ್ಯವಾದಗಳನ್ನು ಹೇಳಿದರು.
ಬಸವಾದಿ ಶರಣರ ಸಂದೇಶ ಸಾರುವ ಫಲಪುಷ್ಪ ಪ್ರದರ್ಶನ : ಗಣರಾಜ್ಯೋತ್ಸವದ ಅಂಗವಾಗಿ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನವನ್ನು ಇಂದು ಉದ್ಘಾಟಿಸಲಾಗಿದೆ. ಬಸವಾದಿ ಶರಣರ ವಚನ ಸಾಹಿತ್ಯ ಆಧಾರಿತವಾದ ಫಲಪುಷ್ಪ ಪ್ರದರ್ಶನ ಈ ಬಾರಿಯ ವಿಶೇಷತೆ. ಹನ್ನರಡನೆಯ ಶತಮಾನದಲ್ಲಿ ಜಾತಿರಹಿತ ಹಾಗೂ ಮೂಡನಂಬಿಕೆ ಕಂದಾಚಾರಗಳಿಂದ ಮುಕ್ತವಾದ ಸಮ ಸಮಾಜ ನಿರ್ಮಾಣ ಮಾಡಲು ಹೋರಾಟ ನಡೆಸಲಾಗಿತ್ತು. ಈ ವಚನ ಚಳವಳಿಯ ಬಗ್ಗೆ ಜನರಿಗೆ ಪ್ರಚುರಪಡಿಸಲು ಉದ್ದೇಶದಿಂದ ಈ ಬಾರಿಯ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಹಲವಾರು ಬಗೆಯ ಫಲಪುಷ್ಪಗಳ ಮೂಲಕ ಬಸವಾದಿ ಶರಣರ ಸಂದೇಶಗಳನ್ನು ಪ್ರಚುರಪಡಿಸಲಾಗುತ್ತಿದೆ. ಇಂದಿನಿಂದ ಜ.28ವರೆಗೆ ಪ್ರದರ್ಶನ ನಡೆಯಲಿದ್ದು, ತೋಟಗಾರಿಕೆ ಇಲಾಖೆ ಮಾಡಿಕೊಟ್ಟಿರುವ ಈ ಅವಕಾಶವನ್ನು ಬೆಂಗಳೂರಿನ ನಾಗರಿಕರು ಸದುಪಯೋಗ ಪಡಿಸಿಕೊಳ್ಳಬೇಕು. ತೋಟಗಾರಿಕಾ ಇಲಾಖೆಯವರಿಂದ ವಿವಿಧ ಫಲ ಪುಷ್ಪಗಳನ್ನು ಬೆಳೆಯಲಾಗುತ್ತದೆ ಎಂಬ ವಿಸ್ತೃತ ಮಾಹಿತಿಯನ್ನು ಜನರು ಪಡೆಯಬಹುದಾಗಿದೆ ಎಂದರು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
——