ಇಲ್ಲ ಬಿಡುಗಡೆ
ಸುದೀರ್ಘ ಆಲೋಚನೆ ಗವ್ವೆನ್ನೊ ಮೌನ
ಅಂತೂ ಇಂತೂ ಕೊನೆಗೊಂಡ ಆ ಚಣ
ಬುದ್ಧಿ ಮನ ಒಂದನೊಂದು ನೋಡಿ
ನಿಡಿದಾದ ಉಸಿರ ದಬ್ಬಿ ನಿಸೂರಾಗಿ
ಮೈಮುರಿದು ನೇರವಾದವು ಏನೋ ನಿರೀಕ್ಷಿಸಿ
ನಿಜವೇ ನನ್ನದೇ ತುಣುಕುಗಳಲ್ಲವೆ ಅವು ಹೊಳೆದಿತ್ತು ಇಬ್ಬರಲ್ಲೂ ಒಮ್ಮೆಗೆ ಏನೋ
ಅಳೆದು ಸುರಿದು ಒದರಿ ಬಿಟ್ಟೆ ಕೊನೆಗೊಮ್ಮೆ
ಇಗೋ ಕೇಳಿ ನಾ ಠರಾಯಿಸಿ ಬಿಟ್ಟೆ ಪಕ್ಕಾ
ನಾನಿನ್ನು ಕಾಲನ ಶಿಷ್ಯ ತಿಳೀತಾ ಇರಿ ಪೂರಾ ಸಜ್ಜಾಗಿ
ಮತ್ತೊಮ್ಮೆ ಮುಖ ಮುಖ ನೋಡಿಕೊಂಡು
ಬುದ್ಧಿ ಕಣ್ಣು ಗಗನಕೇರಿ ಮನ ಕದ್ದು ನೋಡಿ
ಬಂತು ಬಡಬಡ ಓಡಿ ಮೌನ ಮುರಿದು ನನ್ನತ್ತ
ತಲೆ ಸರೀನಾ ಸಂತೆ ಪೇಟೆ ವ್ಯಾಪಾರ ಕೆಟ್ಹೋತು ಕಾಲನ ಹಿಂದೆ ಓಡೋದಿದೆಯಲ್ಲ ಮತ್ತೇನು ಈ ದೀಕ್ಷೆ
ಹೇಳಿಯೇಬಿಟ್ಟೆ ಗಹನವೀ ವಿಚಾರ ಬೇಡ ಒಣಾ ಚೌಕಾಶಿ
ನೋಡು ಆತನ ಗತ್ತಿನ ನಡೆ ಯಾರ ಹಂಗಿಲ್ಲ
ಭಿಡೆ ಮುರವತ್ತುಗಳ ಬೇಡಿ ಇಲ್ಲ ಯಾರ ಅಳು –
ದು:ಖ ಕೇಳದು ಇಲ್ಲ ಗರಜು ಪರಮಿಷನ್ನದು
ಬೇಕು ನಂಗೂ ಆ ಯಾವ ಬಂಧ ಇಲ್ಲದ ನಡೆ ತಿಳೀತಾ
ಕಣ್ಣು ಕೆಳಗಿಳಿಸಿ ನೋಡಿ ಬುದ್ಧಿ ಮತ್ತದೇ ಸ್ಥಿತಿಲಿ
ಗಂಟಿಕ್ಕಿದ ಮುಖದ ಮನ ನೋಡದಂತೆ ಹೇಳಿದೆ
ನೋಡು ಯಾರ ಮನೆ ಕತ್ತಲು ಬೆಳಕಿನ ಗೊಡವೆ ಇಲ್ಲದೆ ಬರೋಬ್ಬರಿ
ಬೆಳಕು ಛಲ್ಲಿ ಇನ್ನೂ ಬೆಳಕಿನ ಹಪಾಹಪಿ ಇದ್ದರೂ ಕತ್ತಲ ಪರದೆ ಹಾಸಿ ಬಿಡುವ ಗಡಸುತನ ನೋಡು ಬೇಕಿದೆ ನಂಗೂ ಅದು
ಬೇಕೋ ಬೇಡ್ವೋ ಬರೋ ಕಾಲಕ್ಕೆ ಪಕ್ಕಾಗಿ
ಮಳೆ ಚಳಿ ಬಿಸಿಲು ಸುರಿದು ನಡುಗಿ ಪಾರು
ಪ್ರವಾಹ ಮುಳುಗಿಸಿ ಹಿಮ ಸುರಿದು ಹೆಪ್ಪುಗಟ್ಟಿಸಿ
ಬಿಸಿಲು ಉರಿದು ಹುರಿದರೂ ಅದಕಿಲ್ಲ ಪರಿವೆ
ಬೇಕೇ ಬೇಕು ನನಗೂ ಆ ನಿರ್ಮೋಹ ನಿರ್ಲಿಪ್ತ ನಿರ್ಮಮಕಾರತೆ
ಬುದ್ಧಿ ಕಣ್ಣು ಅಗಲಿಸಿ ಮನ ಇಷ್ಟಗಲ ಬಾಯ್ದೆರೆದು
ಮರುಕ್ಷಣ ಒಟ್ಟಾಗಿ ಎರಡೂ ಹೌದಾ ಇದಾ ವ್ಯವಹಾರ
ಆತು ಬಿಡು ನಮಗಿಲ್ಲ ಕೆಲಸ ಹೊರಟ್ವಿ ನಾವು
ಇರು ನೀ ಹಾಗೇ ನೆಟ್ಟಗೆ ಬಯಲಲಿ ಗರುಡಗಂಬದಂತೆ
ಒಂದರ ಕೈ ಒಂದು ಹಿಡಿದು ತಿರುಗಿ ನೋಡದೆ ಹೊರಟೆ ಬಿಡಬೇಕೆ ಜತ್ತಾಗಿ
ನಾ ನಿಂದೆ ಬಾಯ್ದೆರೆದು ಈಗ ಬೂರಗದ ಅಳ್ಳೆಯಂತೆ ಪೊಳ್ಳು ಟೊಳ್ಳಾಗಿ
ಕೂಗಿಯೇ ಬಿಟ್ಟೆ ಇದೇನು ಹುಡುಗಾಟ ನಾನೀಗ ಪೂರಾ ಒಂಟಿ
ತಿರುಗಿತು ಮನ ಜಗ್ಗಿ ತರುತ ಬುದ್ಧಿಯನು ಕೈಬಾಯಿ ತಿರುಗಿಸುತ್ತ
ಇದೇ ವ್ಯಾಮೋಹದ ಬಂಧನ ಇಲ್ಲ ಬಿಡುಗಡೆ
ತಿಳಿದುಕೋ
ತಪದಿ ಮುಳುಗಿದ ತ್ಯಾಗಿ ಯೋಗಿಗೂ ಉಂಟು ಮುಕುತಿಯ ಮೋಹ
ಇನ್ನು ನೀ ….!ಮೌನ ತಾಳಿತದು ನಾನೂ ಸಂಪೂರ್ಣ ಮೌನಿ ಜಡಭರತ!
-ಸರೋಜಿನಿ ಪಡಸಲಗಿ, ಬೆಂಗಳೂರು