ಗ್ರಾಪಂ ಚುನಾವಣೆ ನೀತಿ ಸಂಹಿತೆ ಜಾರಿ; ಬಳ್ಳಾರಿ ಜಿಲ್ಲೆಯಲ್ಲಿ 2 ಹಂತಗಳಲ್ಲಿ ಚುನಾವಣೆ -ಡಿಸಿ ನಕುಲ್

ಬಳ್ಳಾರಿ: ರಾಜ್ಯ ಚುನಾವಣಾ ಆಯೋಗವು ಬಳ್ಳಾರಿ ಜಿಲ್ಲೆಯ ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆ-2020ರ ವೇಳಾಪಟ್ಟಿಯನ್ನು ಹೊರಡಿಸಿದ್ದು, ಅದರಂತೆ ಬಳ್ಳಾರಿ ಜಿಲ್ಲೆಯ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಜಿಲ್ಲಾದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದ್ದಾರೆ.
ಮೊದಲನೇ ಹಂತದಲ್ಲಿ ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಹೊಸಪೇಟೆ ಮತ್ತು ಕಂಪ್ಲಿ ಹಾಗೂ ಎರಡನೇ ಹಂತದಲ್ಲಿ ಸಂಡೂರು, ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ ಮತ್ತು ಹರಪನಹಳ್ಳಿ ತಾಲ್ಲೂಕುಗಳಿಗೆ ಚುನಾವಣೆ ಜರುಗಲಿದೆ. ಅದರಂತೆ ಬಳ್ಳಾರಿ ಜಿಲ್ಲೆಯ ಮೊದಲನೇ ಹಂತದ ಚುನಾವಣೆಯು ಡಿ.22ರಂದು ಮತ್ತು ಎರಡನೇ ಹಂತದ ಚುನಾವಣೆಯು ಡಿ.27ರಂದು ನಡೆಯಲಿದೆ. ಮತ ಎಣಿಕೆಯು ಡಿ.30ರಂದು ನಡೆಯಲಿದೆ. ಮಾದರಿ ನೀತಿ ಸಂಹಿತೆಯು ಈಗಾಗಲೇ ಜಾರಿಗೆ ಬಂದಿದ್ದು,ಡಿ.31ರವರೆಗೆ ಜಾರಿಯಲ್ಲಿರಲಿದ್ದು, ಚುನಾವಣೆ ನಡೆಯುವ ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿ ಪ್ರದೇಶದಲ್ಲಿ ಜಾರಿಯಲ್ಲಿರಲಿದೆ.
ಈಗಾಗಲೇ ಚುನಾವಣೆ ಪ್ರಕ್ರಿಯೆ ಪ್ರಾರಂಭಗೊಂಡಿರುವುದರಿಂದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ರಜೆಯನ್ನು ಮಂಜೂರು ಮಾಡದಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಸೂಚಿಸಿದ್ದಾರೆ. ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೇ ಕೇಂದ್ರಸ್ಥಾನವನ್ನು ಬಿಡತಕ್ಕದಲ್ಲ ಎಂದು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ಸೂಚಿಸಿದ್ದಾರೆ.