ಅನುದಿನ ಕವನ-೧೧೧೪, ಕವಿಯಿತ್ರಿ:ಶ್ರೀ..ಮಂಗಳೂರು

ಅವನು:
ಕಡಲ ತೀರದಲಿ ಅದೆಷ್ಟೊಂದು ಅಲೆಗಳು..
ಬಹುಶಃ ನಮ್ಮ ಭೇಟಿಯನ್ನು ನೆನಪಿಸಲು ಬಂದಿರಬಹುದು..
ನಾನು:
ಅಲೆಗಳಿಗೂ ಪಾದ ಚುಂಬಿಸೋ ತವಕ..
ನಿನ್ನನ್ನೇ ಅನುಕರಿಸುತ್ತಿವೆ ನೋಡು…

ಅವನು:
ಸಮಯದ ಮುಳ್ಳುಗಳು ಓಡುತ್ತಲೇ ಇವೆ…
ಎದೆಯೊಳಗೆ ನಿನ್ನ ನೆನಪುಗಳನ್ನು ಗೀರುತ್ತ…
ನಾನು:
ನೆನಪುಗಳ ತಿರುಗಣೆ ಚಕ್ರ ಸುತ್ತುತ್ತಲೇ ಇದೆ..‌
ವಿರಹ ಬೇಗುದಿಯ ಲೆಕ್ಕ ಇಟ್ಟವರು ಯಾರು ಹೇಳು…

ಅವನು:
ಇಂದು ಚಂದಿರನೂ ಸಹ ಉರಿಯುತ್ತಿಹನು
ನಿನ್ನ ನೆನಪುಗಳ ಧಗೆ ಕುದಿಯುತ್ತಿರಬಹುದು
ನಾನು:
ಇಂದಿಲ್ಲಿ ಸೂರ್ಯನೂ ತಂಪಾಗಿಹನು…
ಬಹುಶಃ ನೀನಿಂದು ಬರುವೆಯೋ ಏನೋ…

ಅವನು:
ಯಾರಿಗೆ ಗೊತ್ತಿತ್ತು ನೀನಿರದ ಇರುಳಿನಲ್ಲಿ ನಕ್ಷತ್ರಗಳೂ
ಇಷ್ಟೊಂದು ಕ್ರೂರವಾಗಿ ಚುಚ್ಚುತ್ತ ಹೊಳೆಯುವವೆಂದು…
ನಾನು:
ಯಾರಿಗೆ ಗೊತ್ತಿತ್ತು, ಯಾರೂ ಇರದ ಮೌನ ದಾರಿಯೂ
ನಿನ್ನ ಪ್ರೇಮದ ಪಿಸು ದನಿಯನ್ನು ಗುನುಗುತ್ತದೆ ಎಂದು…

ಅವನು:
ನೀನೊಂದು ಬಯಲು
ನಾನು ಅದರೊಳಗಿನ ಅನುಭೂತಿ
ನಾನು:
ನೀನೊಂದು ಉಕ್ಕುವ ಕಡಲು
ನಾನು ನಿತ್ಯ ಕಾಯುವ ತೀರ

– ಶ್ರೀ (ಶ್ರೀಲಕ್ಷ್ಮಿ ಅದ್ಯಪಾಡಿ) ಮಂಗಳೂರು
—–