ಬಳ್ಳಾರಿ: ಗ್ರಾಮ ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ-2020ರ ಪ್ರಯುಕ್ತ ಜಿಲ್ಲೆಯಲ್ಲಿ ಅಬಕಾರಿ ಅಕ್ರಮಗಳ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಮತ್ತು ಇತರರಿಂದ ಬರುವ ದೂರುಗಳನ್ನು ಸ್ವೀಕರಿಸಿ ಕ್ರಮ ಜರುಗಿಸಲು ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ ಎಂದು ಬಳ್ಳಾರಿ ಅಬಕಾರಿ ಉಪ ಆಯುಕ್ತ ನರೇಂದ್ರಕುಮಾರ್ ಅವರು ತಿಳಿಸಿದ್ದಾರೆ.
ಅಬಕಾರಿ ಅಕ್ರಮಗಳ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಮತ್ತು ಇತರರಿಂದ ಬರುವ ದೂರುಗಳನ್ನು ಸ್ವೀಕರಿಸಿ ಕ್ರಮ ಜರುಗಿಸಲು ರಾಜ್ಯ ಮಟ್ಟದಲ್ಲಿ ಇಲಾಖಾ ಟೋಲ್ ಫ್ರೀ ಸಂಖ್ಯೆ:1800 4252550 ಸ್ಥಾಪನೆ ಮಾಡಲಾಗಿದೆ.
ಅದೇ ರೀತಿ ಜಿಲ್ಲಾ ಮಟ್ಟದಲ್ಲಿ ಬಳ್ಳಾರಿ ಅಬಕಾರಿ ಉಪ ಆಯುಕ್ತರ ಕಛೇರಿಯಲ್ಲಿ ದಿನದ 24 ಘಂಟೆಯು ಕಾರ್ಯ ನಿರ್ವಹಿಸುವಂತೆ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಅಬಕಾರಿ ಉಪ ಆಯುಕ್ತರ ಕಛೇರಿಯ ನಿಯಂತ್ರಣ ಕೊಠಡಿ ದೂ:08392-275555.
ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಹೊಸಪೇಟೆ ಕಛೇರಿಯ ನಿಯಂತ್ರಣ ಕೊಠಡಿ ದೂ:08394-221330(ವ್ಯಾಪ್ತಿ: ಹೊಸಪೇಟೆ, ಕಂಪ್ಲಿ, ಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ).
ಸದರಿ ಕಂಟ್ರೋಲ್ ರೂಮ್‍ನಲ್ಲಿ ಕಛೇರಿಗೆ ಬರುವ ದೂರವಾಣಿ ಕರೆಗಳನ್ನು ಸ್ವೀಕರಿಸಿ ದೂರು ವಹಿಯಲ್ಲಿ ವಿಷಯ, ದೂರುದಾರರ ಹೆಸರು, ದಿನಾಂಕ ಮತ್ತು ಸಮಯವನ್ನು ವಹಿಯಲ್ಲಿ ದಾಖಲಿಸಿ ಚುನಾವಣಾ ನಿಯಂತ್ರಣ ಕೊಠಡಿಯ ಘಟಕಾಧಿಕಾರಿಯವರಿಗೆ ಸಲ್ಲಿಸಲು ಹಾಗೂ ಹಗಲು ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು 10 ಜನ ಸಿಬ್ಬಂದಿಯವರನ್ನು ನಿಯೋಜಿಸಲಾಗಿದೆ.
ನಿಯೋಜಿಸಿದ ಸಿಬ್ಬಂದಿಯು ದಿನನಿತ್ಯದ ಕರ್ತವ್ಯಗಳ ಜೊತೆಗೆ ನಿಯಂತ್ರಣ ಕೊಠಡಿಯ ಕರ್ತವ್ಯ ನಿರ್ವಹಿಸುವುದು ಕಡ್ಡಾಯವಾಗಿದೆ.
ದೂರವಾಣಿ ಮೂಲಕ ಬರುವ ಅಬಕಾರಿ ಅಕ್ರಮಗಳಿಗೆ ಸಂಬಂಧಪಟ್ಟ ದೂರುಗಳನ್ನು ದೂರು ವಹಿಯಲ್ಲಿ ದಾಖಲಿಸುವುದು ಮತ್ತು ಸ್ವೀಕೃತವಾಗುವ ದೂರುಗಳನ್ನು ಸಂಬಂಧಿಸಿದ ವಲಯ ನಿರೀಕ್ಷಕರು ಹಾಗೂ ಉಪ ವಿಭಾಗದ ಅಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ದೂರವಾಣಿ ಮೂಲಕ ತಿಳಿಸುವುದು. ಈ ಕೆಲಸವನ್ನು ಕಟ್ಟುನಿಟ್ಟಾಗಿ ಚಾಚು ತಪ್ಪದೇ ಪಾಲಿಸಲು ಆದೇಶಿಸಿದೆ. ತಪ್ಪಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.