ಅನುದಿನ ಕವನ-೧೧೨೦, ಕವಿ: ಸಿದ್ದುಜನ್ನೂರ್, ಚಾಮರಾಜ ನಗರ, ಕವನದ ಶೀರ್ಷಿಕೆ:ಅನಿಶ್ಚಿತ ಪ್ರೇಮ

ಅನಿಶ್ಚಿತ ಪ್ರೇಮ….

ಕೈ ಹಿಡಿದು ನಡೆಸುತ್ತಾನೆ
ಹೃದಯಕ್ಕೆ ಜೋತು ಬಿದ್ದವನು
ಎನ್ನ ಪ್ರೀತಿಗೆ ಕಟ್ಟಿಬದ್ದನಾಗಿ
ಕಾವಲಾಗಿ ಎಲ್ಲ ಪುಕ್ಕಲು ತನಗಳ ಬಿಟ್ಟು
ಪ್ರೇಮದನಂತದೆಡೆಗೆ ಸಾಗುತ್ತಾನೆ…

ನಾನೋ ಮೊದಲೆ ಅವನ ನಂಬಿಕಸ್ಥೆ
ಅವನು ಹಾಗೆ
ತನ್ನ ಪ್ರೇಮದ ಧಾರಾಳತನದಲ್ಲಿ
ಒಂಚೂರು ಕೊರತೆ ಮಾಡದ
ನನ್ನ ಪ್ರೀತಿಗೆ ಅರ್ಹನಾದ ವ್ಯಕ್ತಿ
ಅರ್ಥಾತ್ ನನ್ನ ಮೆಚ್ಚಿನ ನಾಯಕ…

ಸೋತವರೆಲ್ಲ ಗುನುಗಬಹುದು
ಪ್ರೇಮವೆಂದರೆ ಅನಿಶ್ಚಿತವೆಂದು
ಆದರೆ ನನ್ನ ಪ್ರೇಮದ ಕುರಿತು ನಾನಷ್ಟೆ ಬಲ್ಲೆ
ಮತ್ತು
ಅವನಷ್ಟೆ ಬಲ್ಲ
ಇತಿಹಾಸ ಪುಸ್ತಕ ಸೇರಿದ
ಅದೆಷ್ಟೋ ಪ್ರೇಮಗಳಂತೆ ನಮ್ಮದು
ಸದಾ ಚಿರಂತನವಾದದ್ದು…


-ಸಿದ್ದುಜನ್ನೂರ್, ಚಾಮರಾಜ ನಗರ
—–