ಭಾವ ಭೃಂಗದ ಬೆನ್ನೇರಿ
ಹುಣ್ಣಿಮೆಯ ಕುಡಿಯ ಎಸಳಿನ ತಂಗಾಳಿ
ಭಾವದ ಬೆನ್ನೇರಿ ಸೂಸುತಿತ್ತು !
ನೆನವಿನ ಅಂಗಳದಿ ನೂರೊಂದು ಚಿತ್ತಾರ
ಕನಸಿನ ಕದ ತಟ್ಟಿ ನುಲಿಯುತಿತ್ತು! -೧-
ಮುಂಜಾವು ಸಿಹಿಗನಸು ಶೃತಿಯ ಮ್ಯಾಲೇರಿ
ಮೋಹ ಭಂಗಿ ತಾಳ ಹಾಕುತ್ತಿತ್ತು!
ಗೋಧೂಳಿಯ ಗಾಳ್ಯಾಗ ರಂಗಿನ ತುಮುಲ
ತಾಂಬೂಲದ ತುಟಿ ಕೆಣಕುತ್ತಿತ್ತು ! -೨ –
ಒನಪಿನ ವೈಯಾರ ನೂರೊಂದು ಕನಸಿಗೆ
ಹರೆಯದ ಬೆವರು ಚಿಮ್ಮುತ್ತಿತ್ತು !
ಸುಳಿಗಾಳಿ ಮೈನೆರೆದು ಅರಿಷಿಣ ನೀರೆರೆದು
ತಂಗಾಳಿ ಮೈಯೆಲ್ಲಾ ಮುತ್ತುತ್ತಿತ್ತು ! -೩ –
ತಿಂಗಳ ಅಂಗಳದಿ ಬಿಳಿಮೋಡ ಗರಿಗೆದರಿ
ಎದೆ ಕಟ್ಟು ಬಿಗಿದು ಕಾಡುತ್ತಿತ್ತು !
ಸರಿರಾತ್ರಿ ಕನಸಲ್ಲಿ ಚಿತ್ತಾದ ತೊಳಲಾಟ
ಮುಂಗುರುಳು ಮುತ್ತಿ ಆಡುತ್ತಿತ್ತು ! -೪ –
ನತ್ತಿನ ಕುಡಿನೋಟ ಕತ್ತೊರಳಿ ಕೆಣಕಿದರೆ
ಬತ್ತಿದ ಕನಸೆಲ್ಲ ಚಿಗುರುತ್ತಿತ್ತು !
ಇಬ್ಬನಿಯ ಬಿಂಬದಿ ಕಾಡಿಗೆ ತೀಡಿದಾಗ
ಕಾಡಿನ ಹೂವೊಂದು ನಾಚುತ್ತಿತ್ತು ! -೫ –
-ಡಾ. ಗೋವಿಂದರಾಜ ಆಲ್ದಾಳ —–