ಸಖಿ
ನೀಲಾಕಾಶದದುದ್ದಕ್ಕೂ ಹಾರುವ ಬೆಳ್ಳಕ್ಕಿ ಸಾಲು…
ಮೋಡ ಕವಿಯುತ್ತಿರುವಂತೆಯೇ
ಮನ ಗರಿಗೆದರಿ ನವಿಲು…
ಕಪ್ಪನೆಯ ಆಗಸದಲ್ಲಿ ಮಿಂಚಿದ ನಕ್ಷತ್ರ ಕಂಗಳಿನವಳು
ಮೆಲ್ಲಗುದುರುವ ಮುಗಿಲಮಳೆ
ಅಕ್ಷತೆಯ ಕಾಳಿಗೆ ಹಸಿರತೆನೆ ಬಳುಕಿ
ತೊನೆದಾಡಿ ಹುಲ್ಲ ದಳ ದಳದ ತುಂಬೆಲ್ಲಾ
ಇಬ್ಬನಿ ಹೂ ಮುಡಿದು ಅರಳಿದವಳು
ಮುಂಜಾನೆ ಮಂಜಿನಲಿ ಹೊಂಬೆಳಕ ಲೀಲೆಯಲಿ
ಮಲ್ಲಿಗೆ ನಗೆ ಬೆಳಗಿ ಜೊತೆಯಾದವಳು.
ಹನಿಹನಿ ರಾಸಲೀಲೆಯಲಿ ಕುಣಿದು
ಕೆರೆ ಬಾವಿ ಕೊಳ್ಳಗಳ ಎದೆ ತುಂಬಿಕೊಂಡವಳು
ನೆಲಮುಗಿಲ ಒಲವಿನೊಸಗೆಗೆ
ಜೀವ ಜೀವದ ಬೆಸುಗೆಯಾದವಳು
ನೀರುಣಿಸಿ ಮಣ್ಣದಾಹವನಿಳಿಸಿದ
ಚೈತ್ರ ಚಿಗುರಿನ ಚೆಲುವಿನವಳು
ಹಸಿದ ಒಡಲಿಗೆ ಹಸಿರ ತುತ್ತನಿಟ್ಟ ಕರುಣಾಳು
ತುತ್ತು ಮುತ್ತುಗಳನೊಂದೊಂದೇ ಎಣಿಸಿ
ಪೋಣಿಸಿ ಮಾಲೆಯಾಗಿಸಿ
ಉಸಿರಿಂದುಸಿರಿಗೆ ಜೀಕುವ ಮಾಯೆಯವಳು
ತನು ಬಳಸಿ ಮನವನಾವರಿಸಿ ಮಿಡಿವ ಮೋಹದವಳು
ತನ್ನಾತ್ಮ ಸಖನ ಪ್ರೇಮದ ಛಾಯೆಯಂಥವಳು
ಅವಳೇ ಅವಳೇ ಅವಳು….
ಸಖಿ ಇವಳು.
-ಲಾವಣ್ಯಪ್ರಭ, ಮೈಸೂರು
—–