ನನ್ನವ್ವ..❤
ಅವ್ವ
ಗಾಂಧಿಯ ಅಹಿಂಸೆಯನ್ನು
ಬುದ್ಧನ ಪ್ರೇಮವನ್ನು
ಕ್ರಿಸ್ತನ ಕರುಣೆಯನ್ನೂ
ಬದುಕಿ ಹೋದಳು!
ಅಣ್ಣ-ಅಕ್ಕರ ಪರಿಚಯವೇ
ಇರದವಳು
ವಚನಗಳನ್ನೇ ಜೀವಿಸಿದಳು!
ಕಥೆ-ಕಾವ್ಯಗಳ ಗಂಧವೇ
ಅರಿಯದವಳು
ಕಥೆಯಾದಳು..
ನಾನೆಂದೂ ಕಟ್ಟಲಾಗದ
ಕವಿತೆಯಾದಳು!
ಅಕ್ಷರ ಬಲ್ಲ ನಾನು
ಗಾಂಧಿ-ಬಸವ-ಬುದ್ಧರನ್ನು
ಓದುತ್ತಾ…
ಅಕ್ಕನ ವಚನಗಳನ್ನು ಕೇಳುತ್ತಾ
ಟಿಪ್ಪಣಿ ಬರೆದುಕೊಂಡು
ಬೀಗುತ್ತೇನೆ!
-ರಂಹೊ, ತುಮಕೂರು
—–