ಧೀಮಂತ ಪತ್ರಕರ್ತ ಡಾ. ಬಿ ಆರ್ ಅಂಬೇಡ್ಕರ್ ಕೃತಿ ಬಿಡುಗಡೆ: ಪತ್ರಿಕೋದ್ಯಮ ಪ್ರಸ್ತುತ ಸಂಪೂರ್ಣವಾಗಿ ವಾಣಿಜ್ಯಮಯ -ಲೇಖಕ ಡಾ.ಅಮ್ಮಸಂದ್ರ ಸುರೇಶ್ ಆತಂಕ

ಬಳ್ಳಾರಿ, ಫೆ.1: ಪತ್ರಿಕೋದ್ಯಮ ಪ್ರಸ್ತುತ ಸಂಪೂರ್ಣವಾಗಿ ವಾಣಿಜ್ಯೀಕರಣಗೊಳ್ಳುವ ಹಂತದಲ್ಲಿದೆ ಎಂದು ಲೇಖಕ ಮತ್ತು ಅಂಕಣಕಾರ ಮೈಸೂರಿನ ಡಾ.ಅಮ್ಮಸಂದ್ರ ಸುರೇಶ್ ಅವರು ಆತಂಕ ವ್ಯಕ್ತಪಡಿಸಿದರು.
ನಗರದ ಎಸ್ ಎಸ್ ಎ (ಸರಳಾದೇವಿ) ಸರಕಾರಿ ಪ್ರಥಮ‌ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಪತ್ರಿಕೋದ್ಯಮ ವಿಭಾಗ ಮತ್ತು ಮೈಸೂರಿನ ಸಿರಿ ಸಮೃದ್ಧಿ ಪ್ರಕಾಶನದ ಸಹಯೋಗದಲ್ಲಿ ಆಯೋಜಿಸಿದ್ದ ತಮ್ಮ ರಚನೆಯ ಧೀಮಂತ ಪತ್ರಕರ್ತ ಡಾ. ಬಿ ಆರ್ ಅಂಬೇಡ್ಕರ್ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪತ್ರಿಕೋದ್ಯಮ ವಾಣೀಜ್ಯೀಕರಣದ ಈ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ್ಯವು ಪತ್ರಕರ್ತರ ಬದಲಾಗಿ ಪತ್ರಿಕಾ ಮಾಲೀಕರ ಸ್ವಾತಂತ್ರ್ಯವಾಗಿ ಪರಿವರ್ತನೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಪತ್ರಿಕೋದ್ಯಮದ ಎಂದು ಇದುವರೆಗೂ ಪತ್ರಿಕೋದ್ಯಮವನ್ನು ಗುರುತಿಸಲಾಗುತ್ತಿತ್ತು. ಆದರೆ ಈಗ ಸ್ವಾತಂತ್ರ್ಯ ಪೂರ್ವ, ಸ್ವಾತಂತ್ರ್ಯ ನಂತರ ಮತ್ತು ಉದಾರೀಕರಣ ಮತ್ತು ಜಾಗತೀಕರಣದ ನಂತರದ ಪತ್ರಿಕೋದ್ಯಮ ಎಂಬ ಮೂರು ಹಂತಗಳಲ್ಲಿ ಅಧ್ಯಯನ ಮಾಡಬೇಕಾಗಿದೆ ಎಂದು ಹೇಳಿದರು.
ಲಾಭ ಮತ್ತು ಪ್ರಸರಣಕ್ಕಾಗಿ ಕೆಲವು ಪತ್ರಿಕೆಗಳು ಜನಪ್ರಿಯ ವರದಿ ಹಾಗೂ ಲೇಖನಗಳ ಹಿಂದೆ ಬಿದ್ದಿದ್ದು ಕೃಷಿ ಮತ್ತು ಗ್ರಾಮೀಣ ವಿಷಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿವೆ ಎಂದು ಡಾ. ಸುರೇಶ್ ಅವರು ವಿಷಾದ ವ್ಯಕ್ತಪಡಿಸಿದರು.


ಕೃತಿ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ, ಚಿಂತಕ ಡಾ. ವೆಂಕಟಯ್ಯ ಅಪ್ಪಗೆರೆ ಅವರು,
ಸಮ ಸಮಾಜಕ್ಕಾಗಿ ಹೋರಾಡಿದ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರು ದೂರದೃಷ್ಟಿಯುಳ್ಳ ಮಹಾನ್ ನಾಯಕರಾಗಿದ್ದರು ಎಂದರು.
ಬಹುಮುಖಿ ಡಾ. ಅಂಬೇಡ್ಕರ್ ಅವರು ಭಾರತೀಯ ರಿಸರ್ವ ಬ್ಯಾಂಕ್(ಆರ್.ಬಿ.ಐ)ಸ್ಥಾಪನೆಗೆ ಕಾರಣವಾಗಿದ್ದಾರೆ. ಇವರ ಸಂಶೋಧನಾ ಬರಹದ  ‘ರೂಪಾಯಿ  ಸಮಸ್ಯೆ’ ಪುಸ್ತಕವೇ ಆರ್ ಬಿ ಐ ಆರಂಭವಾಗಲು ಪ್ರೇರಣೆ ನೀಡಿ ಭಾರತದಲ್ಲಿ ಹಣಕಾಸು ವ್ಯವಸ್ಥೆ ಉತ್ತಮವಾಗಿರಲು‌ ಕಾರಣವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಇತ್ತೀಚಿನ ವರ್ಷಗಳಲ್ಲಿ ಆರ್ ಬಿ ಐ ತನ್ನ ಸ್ಥಾಪನೆ ದಿನದಂದು ಬಾಬಾಸಾಹೇಬರನ್ನು ಸ್ಮರಿಸುತ್ತಿರುತ್ತಿರುವುದು ಅಭಿನಂದನಾರ್ಹ ಎಂದರು.


ಕೃತಿ ಪರಿಚಯಿಸಿದ  ಕರ್ನಾಟಕ ಬೌದ್ಧ ಸಮಾಜ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಅಧ್ಯಾಪಕ ಕಂಪ್ಲಿಯ ರಮೇಶ್ ಸುಗ್ಗೇನಹಳ್ಳಿ ಅವರು, ಡಾ. ಅಂಬೇಡ್ಕರ್ ಅವರು ಅಮೆರಿಕಾದಲ್ಲಿ ಅಧ್ಯಯನ ಮಾಡುತ್ತಿದ್ದ ಅವಧಿಯಲ್ಲಿ ಪತ್ರಿಕೆಗೆ ಮತ್ತು ಪತ್ರಿಕೋದ್ಯಮ ಕುರಿತು ಸಾಕಷ್ಟ ಅಧ್ಯಯನ ಮಾಡಿದ್ದರು. ಇವರು ಆರಂಭಿಸಿದ ಎಲ್ಲಾ ಪತ್ರಿಕೆಗಳು ದನಿ ಇಲ್ಲದವರ ದನಿಯಾಗಿದ್ದವು. ಮಹಿಳೆಯರು, ಹಿಂದುಳಿದ ಶೋಷಿತರ ಪರವಾಗಿದ್ದವು ಎಂದು ಹೇಳಿದರು.
ಡಾ.ಅಂಬೇಡ್ಕರ್ ಅವರ ಆಶಯಗಳಂತೆ  ಮಾಧ್ಯಮಗಳು ಕಾರ್ಯನಿರ್ವಹಿಸಿದರೆ ಉತ್ತಮ ಸಮಾಜ ನಿರ್ಮಾಣಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್ ಕೆ ಮಂಜುನಾಥ್ ರೆಡ್ಡಿ ಅವರು ಮಾತನಾಡಿ,  ಪತ್ರಕರ್ತರಾಗಿ ಸಾರ್ವಜನಿಕ‌ ಜೀವನವನ್ನು ಆರಂಭಿಸಿದ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರು ಪತ್ರಿಕೋದ್ಯಮಿಯಾಗಿಯೂ ದೇಶಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಡಾ. ಅಂಬೇಡ್ಕರ್ ಅವರು ಆರಂಭಿಸಿದ ಮೊದಲ‌ ಪತ್ರಿಕೆ  ಆರಂಭವಾಗಿ ಜ.31ಕ್ಕೆ 104 ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ನಮ್ಮ ಕಾಲೇಜಿನಲ್ಲಿ ಧೀಮಂತ ಪತ್ರಕರ್ತ ಡಾ. ಬಿ ಆರ್ ಅಂಬೇಡ್ಕರ್ ಕೃತಿ ಬಿಡುಗಡೆಯಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.


ಕಾರ್ಯಕ್ರಮವನ್ನು ವಿಜಯ ಕರ್ನಾಟಕ ದಿನಪತ್ರಿಕೆಯ ಹಿರಿಯ ಉಪ ಸಂಪಾದಕ ಸುಭಾಷ್ ಮಂಗಳೂರು ಅವರು ಉದ್ಘಾಟಿಸಿದರು.
ಸನ್ಮಾನ: ಇದೇ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಪರವಾಗಿ ಕೃತಿಕಾರ ಡಾ.‌ಅಮ್ಮಸಂದ್ರ ಸುರೇಶ್ ಅವರನ್ನು ಪ್ರಾಚಾರ್ಯರು, ಗಣ್ಯರು ಸನ್ಮಾನಿಸಿ ಗೌರವಿಸಿದರು.
ಇದೇ ಸಂದರ್ಭದಲ್ಲಿ ವರದಿಗಾರಿಕೆ, ಛಾಯಾಗ್ರಹಣವನ್ನು ಶ್ರದ್ಧೆ, ಆಸಕ್ತಿಯಿಂದ‌ ಕಲಿಯುತ್ತಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಪುಸ್ತಕ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಲೇಖಕ ಡಾ. ಅಮ್ಮಸಂದ್ರ ಸುರೇಶ್ ಅವರು ಪತ್ರಿಕೋದ್ಯಮಕ್ಕೆ ಸಂಬಂದಿಸಿದ ತಮ್ಮ ಐದು ಕೃತಿಗಳನ್ನು ಕಾಲೇಜ್ ಗ್ರಂಥಾಲಯಕ್ಕೆ ನೀಡಿದರು.


ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಹೊನ್ನೂರಲಿ ಐ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ದಸ್ತಗಿರಿಸಾಬ್ ದಿನ್ನಿ ವೇದಿಕೆಯಲ್ಲಿದ್ದರು.
ಡಾ.‌ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆಯ ನಿರ್ದೇಶಕಿ ಸರಸ್ವತಿ ಎನ್ ಅಪ್ಪಗೆರೆ, ಉಪನ್ಯಾಸಕ ಸಿದ್ದೇಶ್ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿ ಮಹೇಶ್ ಡಿ ಎನ್ ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸಿ.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮತ್ತೋರ್ವ ಉಪನ್ಯಾಸಕ ಜಯರಾಂ ಟಿ ನಿರೂಪಿಸಿದರು. ವಿದ್ಯಾರ್ಥಿ ಹಬೀಬ್ ಅಲ್ಲಾ ವಂದಿಸಿದರು. ಜನಾರ್ದನ್, ಪವಿತ್ರ, ಸುನೀಲ್‌ಕುಮಾರ್, ಶಾಂತ ಮತ್ತಿತರರು ನಿರ್ವಹಿಸಿದರು.
—–