ಅನುದಿನ ಕವನ-೧೧೨೮, ಹಿರಿಯ ಕವಿ: ಸುಬ್ರಾಯ ಚೊಕ್ಕಾಡಿ, ದಕ್ಷಿಣ ಕನ್ನಡ, ಕವನದ ಶೀರ್ಷಿಕೆ: ಎಂಥ ಕಾಲವು

ಎಂಥ ಕಾಲವು

ಎಂಥ ಕಾಲ ಎಂಥ ಕಾಲ
ಎಂಥ ಕಾಲವು
ಎಂಥವರನೂ ಯಾಮಾರಿಸುವ
ಜಾಣ ಕಾಲವು.

ಹೊಗಳು ಭಟರ ತಂಡ ಕಟ್ಟಿ
ಪೊರೆವ ಕಾಲವು
ಆಗದವರ ಮರೆಗೆ ಸರಿಸಿ
ಮೆರೆವ ಕಾಲವು.

ಒಳ್ಳೆತನಕೆ ಕಾಲವಲ್ಲ
ಎನುವ ಕಾಲವು
ಮಳ್ಳತನವೆ ನಮ್ಮ ದೈವ
ಎನುವ ಕಾಲವು.

ಹೊರಗೆ ತಳಿರು ತೋರಣದಲಿ
ಮೆರೆವ ಕಾಲವು
ಒಳಗೆ ಇರುವ ಗೋಳಿ ಸೊಪ್ಪ
ಮರೆವ ಕಾಲವು.

ಕಳಪೆಗೇನೆ ಇಲ್ಲಿ ಸ್ಥಾನ
ಕೊಡುವ ಕಾಲವು
ಒಳಿತಿಗೇಕೆ ಇಲ್ಲಿ ಮಾನ
ಎನುವ ಕಾಲವು.

ಅನರ್ಹರನು ಎತ್ತಿ ಹಿಡಿದು
ನಲಿವ ಕಾಲವು
ಅರ್ಹರನ್ನು ಬದಿಗೆ ಸರಿಸಿ
ನಗುವ ಕಾಲವು.

ಈ ಅರ್ಹತೆ ನಿಮಗೆ ಇರಲು
ಕರೆವ ಕಾಲವು
ಆರಾಮಾಗಿ ಇರಲು ಹೇಳು
ವಂಥ ಕಾಲವು.

ಬನ್ನಿ ಸ್ವಾಮಿ,ಸೇರಿಕೊಳ್ಳಿ
ಸುಖದ ಕಾಲವು
ನಾಯಕನಿಗೆ ಜೈಜೈ ಎನುತ
ಮೆರೆವ ಕಾಲವು.

-ಸುಬ್ರಾಯ ಚೊಕ್ಕಾಡಿ, ದಕ್ಷಿಣ ಕನ್ನಡ
——