ಅನುದಿನ ಕವನ-೧೧೨೯, ಕವಯಿತ್ರಿ: ಡಾ.ಕೆ.ಎಸ್ ಗಿರಿಜಾ, ತುಮಕೂರು, ಕವನದ ಶೀರ್ಷಿಕೆ: ನಮ್ಮ ದನಿ….

ತುಮಕೂರು ವಿ ವಿ ಯ ಕಲಾ ವಿಭಾಗದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಕೆ.ಎಸ್ ಗಿರಿಜಾ ಅವರ ಕವಿತೆಗಳಲ್ಲಿ ಹೋರಾಟದ ದನಿ ಮಾತ್ರವಲ್ಲ ಜೀವಪ್ರೇಮವೂ ಇದೆ. ಮೌನವನ್ನು ಧ್ಯಾನಿಸುವ, ಸಮಸಮಾನತೆಗೆ ಹಂಬಲಿಸುವ ಡಾ. ಗಿರಿಜಾರವರ ‘ನಮ್ಮ ದನಿ’ ಕವಿತೆ ಇಂದಿನ ‘ಅನುದಿನ ಕವನ’ ಕಾಲಂನಲ್ಲಿ!

ನಮ್ಮ ದನಿ…..

ಕೇಳಿಸಲೇ ಇಲ್ಲ ನಿಮಗೆ
ನಮ್ಮ ದನಿ

ಸಾಗರೋಪಾದಿಯಲ್ಲಿ ನಾವು ನಡೆದುಬಂದರೂ
ಕೇಳಿಸಲೇಯಿಲ್ಲ ನಿಮಗೆ
ನಮ್ಮ ದನಿ

ಸಾವುನೋವುಗಳ ಕಂಡು ಹೈರಾಣರಾದ ನಾವು ನ್ಯಾಯ
ಕೇಳಲು ಬಂದರೆ
ತಿಳಿಯಲೇಯಿಲ್ಲ ನಿಮಗೆ
ನಮ್ಮ ಅಳಲು!

ನಮ್ಮ ದುಃಖ ದುಮ್ಮಾನಗಳ
ಹತಾಶೆಯ ಬದಿಗೊತ್ತಿ
ನೋವು ಸಂಕಟಗಳ ಮರೆತು
ದನಿ ಎತ್ತಿ ತಲೆ ಎತ್ತಿ ಮುನ್ನಡೆದರೂ
ಕೇಳಿಸಲೇ ಇಲ್ಲವೇ ನಮ್ಮ ಕೂಗು ನಿಮಗೆ!

ಮಾರ್ದನಿಸುವುದು ನಮ್ಮ ದನಿಯು ನೂರ್ಪಟ್ಟು
ಇಂದಲ್ಲ ನಾಳೆ,
ಮತ್ತೆ ಬಂದೇ ಬರುವೆವು
ಮತ್ತಷ್ಟು ಶಕ್ತಿಯ ಹೊತ್ತು
ಇಂದು ಕೇಳಿಸದ ದನಿಯು
ಅಂದು ಕೇಳಲೇಬೇಕು
ಕೇಳಸಿಗದಿದ್ದರೆ ಮೇಳೈಸುವುದು
ಹೊಸ ಅಲೆಯೊಂದು
ನವ ಪೀಳಿಗೆಯೊಂದು
ಕೇಳಲೇ ಬೇಕು ಆಗ ನೀವು
ನಮ್ಮ ದನಿಯ

-ಡಾ. ಗಿರಿಜಾ ಕೆ.ಎಸ್, ತುಮಕೂರು