ನೀಲು…
ಎಲ್ಲೊ ಕಡಲಿನ ಮುತ್ತಾಗಿ ಮೂಡಿ
ಇನ್ನೆಲ್ಲೊ ತೊರೆಯಾಗಿ ಹರಿದು
ಮತ್ತೆಲ್ಲೊ ಗಿಳಿಯಾಗಿ ಕೂಗಿ
ಅವಳು ನೂರು ಅವತಾರವನ್ನೆತ್ತಿದಳು.
ಅವಳು ದ್ರೌಪದಿಯ ಶ್ರೀಮುಡಿ,
ವೈದೇಹಿಯ ವಿರಹ;
ಕಾಳಿದಾಸನ ವನದ ಸಖಿಯರ
ತುರುಬಿನಲ್ಲಿ ಮಲ್ಲಿಗೆಯ ದಂಡೆ.
ಅವಳು ಅಕ್ಕಮಹಾದೇವಿಯ ಆತ್ಮ
ಹೆಲೆನ್ನಳ ನಖ, ಮಾಂಸ
ಉಮರ್ ಖಯಾಮನ ಮದಿರೆ;
ಬೋದಿಲೇರನ ಬೆಂಕಿ.
ಅವಳು ಕುವೆಂಪುವಿನ ಕೋಗಿಲೆ
ಅಂಬಿಕಾತನಯನ ಭೃಂಗ
ಯುಗಯುಗದ ಕವಿಗಳ ಮಾನಸ ಸಖಿಯು
ಕನ್ನಡಿತಿಯರ ಕನ್ನಡಿಯಿನ್ನೂ ಕಾಣದ ಮೀನಿನ ಹೆಜ್ಜೆ.
ಅವಳು ಇಂದ್ರನರಮನೆಯಲ್ಲಿ
ಅಮೃತವ ಹೀರಿ ಅಮೃತಮತಿಯಾದಳು
ಯಶೋಧರನರಮನೆಯಲ್ಲಿ ಮಾವುತನ ಬೆಂಬತ್ತಿ
ಪೊಲ್ಲಮೆಯೆ ಲೇಸು ನಲ್ಲರ ಮೆಯ್ಯೊಳೆಂದು ಸಾರಿದಳು.
ಖಂಡಖಂಡಗಳ ನರಕಗಳ ಹಾದು
ಕತ್ತಲೆಯ ನುಂಗಿದಳು
ಮುಟ್ಟಬಾರದ ಮರವನ್ನು ಮುಟ್ಟಿದಳು
ತಿನ್ನಬಾರದ ಹಣ್ಣು ತಿಂದು ತಿನ್ನಿಸಿದಳು.
ಅವಳು ಹುಡುಗಿಯರ ಕಣ್ಣ ಕುಡಿಮಿಂಚು
ಜಗದೆಲ್ಲ ಗಂಡುಗಳ ಎದೆಯ ಖಾಯಂ ಚಿತ್ರ
ವೃದ್ಧೆಯರ ಒಣನಾಲಗೆಯ ಕೊನೆಯ ಪಸೆ;
ವೇಶ್ಯೆ, ಪತಿವ್ರತೆಯರ ಕಟ್ಟಕಡೆಯ ಆದರ್ಶ.
ಅವಳು ಮೌನಿಗಳ ಮಾತಾಗಿ
ಮಾತಾಳಿಗಳೆದುರು ಮೌನದಾಳಿದಳು
ಬಯಲು ಸಿಕ್ಕಲ್ಲಿ ಬೆತ್ತಲಾದಳು
ಬೆತ್ತಲ ಹಿಡಿಯಹೋದಲ್ಲಿ ಬಯಲಾದಳು;
ಆಲಯವ ಕಟ್ಟಿದರೆ ಲಯವಾದಳು.
-ಡಾ. ನಟರಾಜ್ ಹುಳಿಯಾರ್, ಬೆಂಗಳೂರು
—–