ಅನುದಿನ ಕವನ-೧೧೩೨, ಕವಿ:ಡಾ. ವೆಂಕಟೇಶ್ ನೆಲ್ಲುಕುಂಟೆ, ಬೆಂಗಳೂರು, ಕವನದ ಶೀರ್ಷಿಕೆ: ಹೊಡೆಯಬೇಡಯ್ಯ ಮೊಳೆಯ ಮರದ ಎದೆಗೆ

ಹೊಡೆಯಬೇಡಯ್ಯ ಮೊಳೆಯ ಮರದ ಎದೆಗೆ

ಇದು ಮಾಗಿ
ಕಾಲ ಕರಗಿ
ನೆಲಕ್ಕಿಳಿಯುತ್ತವೆ ಎಲೆ ಕೊರಗಿ
ಮುಗಿಲ ಮೇಲಿಂದ ಒಣಗಿ ಒರಗುವುದೇನು ಸಂಭ್ರಮದ ಸಂಗತಿಯೆ?
ಸುಡು ಮಂಜು
ಕೆಡು ಕೆಂಡ
ಹೃದಯಕ್ಕೆ ಉಳಿ ಬಡಿವ ದೆವ್ವ ಗಾಳಿ

ಬೋಳು ಮರ;
ಒಡಲೊಳಗೆ ಬಿಸೀ ಸ್ವರ
ನಿನ್ನ ಮೊಮ್ಮಕ್ಕಳಿಗೆ ಪ್ರೇಮದ ಹಾರ
ರಸ ತೊಟ್ಟಿಕ್ಕುವ ಹಣ್ಣಿನ ಜೀವಧಾರ
ಕಾಪಿಟ್ಟು ಬೆಳೆಸುತ್ತಿದೆ
ಕನಸು ಬಿಡದೆ
ಹೊಡೆಯ ಬೇಡಯ್ಯ ಮೊಳೆಯ ಮರದ ಎದೆಗೆ
ಒಂಟೆ ಡುಬ್ಬದೊಳಗೊಂದು ಕುಂಟೆ ನೀರು
ಕತ್ತರಿಸಿ ಕುಡಿದರೆ ದೆವ್ವ ನೂರು
ಬದುಕೀತೆ ಮರುಭೂಮಿ ಮುಗಿಲು ತತ್ತಿ ಹಾಕುವವರೆಗೆ?

ಮರ;
ಮಾಗಿ ದಾಟುವುದೇನು ಹುಡುಗಾಟವೆ?
ಹಕ್ಕಿ ಹಾಕುತ್ತವೆ ಹಿಕ್ಕೆ ಮೈಯ ಮೇಲೆ
ಮರಕ್ಕೆ ಚವುರಿ ಇಲ್ಲ
ಬೀಸಣಿಕೆ ಬಾಲವೂ ಇಲ್ಲ
ಚೇಳು ಕಡಿದರೂ ನಿಲ್ಲಬೇಕು ಗೊಮ್ಮಟನ ಹಾಗೆ.
ಮೋಟು ಕೈಯಿ ಹೊಲಿದ ಬಾಯಿ
ಚರ್ಮ ಒಡೆದು ಉದುರುತ್ತಿದೆ
ನೋವಿನಿಂದ
ಕುಣಿಯಬೇಕೆಂದು
ಕಾಯುತ್ತಿದೆ ಕೆಂಡ
ಸಾಮಿಲ್ಲಿನ ಹಲ್ಲುಗಳು
ಮೀಸೆ ಮಸೆಯುವ ಮಿಂಡ
ಊರ ಜೋಯಿಸರ ಶ್ರಾದ್ಧ ಮಾಡಬೇಕು
ಮಾರವಾಡಿ ಇದ್ದಿಲ ತಟ್ಟಿ ಭರ್ತಿಮಾಡಬೇಕು
ಪುಡಾರಿ ಮನೆ ಕಟ್ಟುತ್ತಿದ್ದಾನೆ ಕಿಟಕಿ ಬಾಗಿಲಾಗಬೇಕು
ಹಡಗು, ರೈಲು
ಐಲು ಹತ್ತಿದ ಹುಡುಗನ ಬುಗುರಿ ಚೆಂಡು
ಅರ್ಡ್ವಟೈಸಿನ ಕ್ರಿಕೆಟ್ಟು ದಾಂಡು
ಕಡೆಗೆ ಬ್ಯಾಂಡಿಗೂ ಬೇಕು!

ಹೊಡೆಯ ಬೇಡಯ್ಯ ಮೊಳೆಯ ಮರದ ಪಾದಕ್ಕೆ
ನೆಲಕ್ಕೆ ನೆತ್ತರೆಂದರೆ ವಾಕರಿಕೆಯಂತೆ
ಎಷ್ಟು ಕುಡಿದೀತು?
ರೈತನೆದೆ ಬಿರುಕು
ಎರೆ ಮಣ್ಣು ಹುರುಕು
ಕೆರೆಯ ಹೊಕ್ಕುಳ ಸೀಳಿ
ನಳ್ಳಿ ನೀರೊಳ್ಳೆ ಗಿರ್ಲು ಮೀಸೆಯ ಕೊರವ
ಹರಿದು ಚೂರಾದ ಅಸ್ತಿಪಂಜರ ಪರ್ವ
ಮರದ ಬೇರುಗಳೂ ಹರಿಯುತ್ತವೆ ಪಟಪಟನೆ
ನೆಲದ ಜೊತೆಗೆ

ಇಷ್ಟೆಲ್ಲ ದಾಟಿ ಮೆಲ್ಲನೆ ಮೂಡುತ್ತದೆ ವಸಂತ
ದೇವ ಧನ್ವಂತ್ರಿಯ ಹಾಗೆ
ಔಷಧಿಯ ಹಡಪ ಹಿಡಿದು
ದೆವ್ವದ ಎದೆಯೊಳಗೂ ಪ್ರೀತಿ ಹುಟ್ಟುತ್ತದೆ ಮೊಗ್ಗಿನಂತೆ
ಹೂವಿಗೆರಗುವ ದುಂಬಿಗಳು
ಹೂತು ಹಾಕುತ್ತವೆ ದೆವ್ವದ ಕನಸ್ಸನ್ನು
ಹುಮ್ಮಸ್ಸಿನಿಂದ

ಮರವೇ ದೇವ ವರವೇ
ಮಾತೂ ರಂಪವಾಗಿದೆ ನಾಡಿನಲ್ಲಿ
ಕಾಯಬೇಕಷ್ಟೆ ವಸಂತದವರೆಗೆ
ತೆಂಕ ಗಾಳಿಯು ಸುಳಿದು
ಸುಳಿ ಮೂಡಿ ನಗುವವರೆಗೆ
ಮೊಳೆ ಹೊಡೆದರೂ ನಿಲ್ಲಬೇಕು
ಕ್ರಿಸ್ತನಂತೆ ಅದುವರೆಗೆ.


-ಡಾ. ವೆಂಕಟೇಶ್ ನೆಲ್ಲುಕುಂಟೆ, ಬೆಂಗಳೂರು                   —–