ಮಹತ್ವವನ್ನು ಸೃಷ್ಟಿಸುವ ಸಾಹಿತ್ಯ ಬರೀ ಭಾಷಾ ನಿಕಾಯಗಳಿಗೆ‌ ಸೀಮಿತವಲ್ಲ -ಸಾಹಿತಿ ಚಿದಾನಂದ ಸಾಲಿ

ಬಳ್ಳಾರಿ,ಫೆ 6: ಸಾಹಿತ್ಯ ಬರೀ ಭಾಷಾ ನಿಕಾಯಗಳಿಗೆ‌ ಸೀಮಿತವಲ್ಲ, ವಿಜ್ಞಾನ, ವಾಣಿಜ್ಯ ಸೇರಿದಂತೆ ಎಲ್ಲಾ‌ ವಿಭಾಗಗಳನ್ನು ಒಳಗೊಂಡಿರುತ್ತದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿಯ ಸದಸ್ಯ  ಡಾ. ಚಿದಾನಂದ ಸಾಲಿ ಅವರು ಹೇಳಿದರು.
ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ( ಸ್ವಾಯತ್ತ )ಕಾಲೇಜಿನ  ಕನ್ನಡ ವಿಭಾಗ ಮಂಗಳವಾರ  ಆಯೋಜಿಸಿದ್ದ ‘ ಪಠ್ಯ ಲೇಖಕರೊಂದಿಗೆ ಸಂವಾದ ‘  ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಲ್ಲಾ ವಿಭಾಗಗಳನ್ನು ಒಳಗೊಳ್ಳುವ, ಮಹತ್ವವಾದುದನ್ನು ಸೃಷ್ಟಿಸುವ ಅಂತಃಸತ್ವ ಸಾಹಿತ್ಯಕ್ಕಿದೆ ಎಂದು ಅಭಿಪ್ರಾಯ ಪಟ್ಟರು.
ಬರಹಗಾರ ರೂಪಗೊಳ್ಳಲು ಹಳ್ಳಿ ಮತ್ತು ನಗರ ಮುಖ್ಯವಲ್ಲ. ಅವನಲ್ಲಿ ಸೃಜನಶೀಲ ಪ್ರತಿಭೆ ಇದ್ದರೆ ತಾನಿರುವ ಪರಿಸರ ಎಂದಿಗೂ ಅಡ್ಡ ಗೋಡೆಯಾಗಲಾರದು ಎಂದು ತಿಳಿಸಿದರು.


ಹಳ್ಳಿಗಳಲ್ಲಿ ಕೆಲವು ಅನಾನುಕೂಲಗಳಿವೆ ನಿಜ. ನಮಗೆ ಬೇಕಿದ್ದ ಪತ್ರಿಕೆ ,ಪುಸ್ತಕ , ಸಿನಿಮಾ,ಸಾಹಿತ್ಯಿಕ ಕಾರ್ಯಕ್ರಮಗಳು ಸಕಾಲಕ್ಕೆ ಸಿಗುವುದಿಲ್ಲ ಆದರೆ ನಗರದಲ್ಲಿ ಈ ಬಗೆಯ ಯಾವುದೇ ಕೊರತೆಗಳು ಇರುವುದಿಲ್ಲ. ಇವೆಲ್ಲವುಗಳನ್ನು ಮೀರಿ ಸೃಜನಶೀಲ ಬರಹಗಾರ ಬೆಳೆಯಬೇಕಾಗುತ್ತದೆ ಎಂದ ಅವರು
ನಮ್ಮ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಇದಕ್ಕೆ ಅನೇಕ ಉದಾಹರಣೆಗಳು ಸಿಗುತ್ತವೆ ಎಂದು ಮಾರ್ಮಿಕವಾಗಿ ನುಡಿದರು.
ಯುವ ಪೀಳಿಗೆಯ ಮನಸ್ಸು ಆರಾಧನೆ ಮತ್ತು ಆಲೋಚನೆಯ ಕಡೆ ಹೊಯ್ದಾಡುತ್ತಿರುತ್ತದೆ.ಅವರಿಗೆ ತೆರೆಯ ಮೇಲಿನ  ಪರದೆಯಲ್ಲಿ ನಟರಾಗಿ , ಹಾಡುಗಾರರಾಗಿ ಯಾರು ದೊಡ್ಡದಾಗಿ ಕಾಣಿಸಿಕೊಳ್ಳುತ್ತಾರೋ ಅವರನ್ನೇ ಆರಾಧಿಸುತ್ತಾರೆ. ಆದರೆ ಒಬ್ಬ ಸೃಜನಶೀಲ ಲೇಖಕ ತನ್ನ
ಪಾಡಿಗೆ ತಾನಿದ್ದು  ಓದು ಮತ್ತು ಬರೆವಣಿಗೆಗೆ
ತೆರೆದುಕೊಳ್ಳುತ್ತ , ನಿತ್ಯದ ತಲ್ಲಣಗಳೆಡೆ  ಹೊಸ ಆಲೋಚನೆಗೆ ಈಡು ಮಾಡುತ್ತಾನೆ ಎಂದು ಹೇಳಿದರು.
ಕಥೆ ಮತ್ತು ಲಲಿತ ಪ್ರಬಂಧಕ್ಕೆ ಇರುವ ಸೂಕ್ಷ್ಮ ವ್ಯತ್ಯಾಸವೇನು ಎಂದು ಕೇಳಿದ ವಿದ್ಯಾರ್ಥಿಯ ಪ್ರಶ್ನೆಗೆ ಕಥೆಯಲ್ಲಿ ಸೂಕ್ಷ್ಮತೆ ,ಲೋಕ ಗ್ರಹಿಕೆ, ಒಳಗೊಳ್ಳುವಿಕೆ ವಿಶಾಲವಾಗಿರುತ್ತದೆ. ಪ್ರಬಂಧ ತೆಳು , ಲಘು ,ಆತ್ಮಕಥನ , ರಂಜನೀಯ ಭಾಷೆ,ಸರಳ ನಿರೂಪಣೆಯ ಧಾಟಿಯಲ್ಲಿರುತ್ತದೆ ಎಂದರು . ಕಥೆ ಹಾಗಲಕಾಯಿ ಇದ್ದ ಹಾಗೆ. ಇದಕ್ಕೆ ಬೆಲ್ಲ ಹಾಕಿ ಹೇಳುವುದು ಪ್ರಬಂಧ ಎಂದು ಸಾಲಿ ವಿವರಿಸಿದರು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಡುತಿನಿ ಬಿಟಿಪಿಎಸ್ ಡಿ.ಜಿ.ಎಂ., ಸಾಹಿತಿ ವೈ.ಬಿ.ಹಾಲಭಾವಿ ಅವರು, ಸಾಹಿತ್ಯವನ್ನು ಓದುವ , ಗ್ರಹಿಸುವ ಸೂಕ್ಷ್ಮತೆಯ ಕೊರತೆ ಇಂದಿನ ವಿದ್ಯಾರ್ಥಿಗಳಲ್ಲಿ ಹೆಚ್ಚು ಕಂಡು ಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ಸಂವೇದನೆಯಿಂದ ಇಂದಿನ ತಲೆಮಾರು ವಿಮುಖರಾಗುತ್ತಿದ್ದಾರೆ ಇದು ಶೋಚನೀಯ ಸಂಗತಿ ಎಂದರು.
ಪ್ರಸ್ತುತ ಡಿಜಿಟಲ್ ಯುಗದಲ್ಲಿ ಎಲ್ಲಾ ಮಾಹಿತಿ ಕ್ಷಣಾರ್ಧದಲ್ಲಿ ದೊರೆಯುತ್ತಿದ್ದು, ಉತ್ತಮವಾದುದನ್ನೇ ಆಯ್ಕೆ ಮಾಡುವ ಜಾಣ್ಮೆ ವಿದ್ಯಾರ್ಥಿಗಳಿಗೆ ಇರಬೇಕು
ಎಂದು ಹಾಲಬಾವಿ ಸಲಹೆ ನೀಡಿದರು.
ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಪಲ್ಲವಿ, ಸಾಹಿತ್ಯದ ಓದು , ಸಾಂಸ್ಕೃತಿಕ ಚಟುವಟಿಕೆಗಳು ಮನುಷ್ಯರನ್ನು ಸಂತೋಷದಿಂದ ಇಡುತ್ತವೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ದಸ್ತಗೀರಸಾಬ್ ದಿನ್ನಿ,
ಇಂತಹ ಸಂವಾದಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು, ಸೃಜನಶೀಲ ಆಸಕ್ತಿಯನ್ನು ಹೆಚ್ಚಿಸುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್ .ಕೆ .ಮಂಜುನಾಥ್ ರೆಡ್ಡಿ ಅವರು ವಹಿಸಿದ್ದರು.


ಸಂವಾದ: ವಿದ್ಯಾರ್ಥಿನಿಯರಾದ ಗೌರಿ ತ್ರಿವೇದಿ, ಷಿರೀಸಾ, ರಕ್ಷಣ, ಭವಾನಿ ಮತ್ತಿತರರು ಸಂವಾದದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರಾದ ರಾಮಸ್ವಾಮಿ, ಪ್ರವೀಣಕುಮಾರ್ , ಲಿಂಗಪ್ಪ, ಉಪನ್ಯಾಸಕರಾದ ಡಾ.ಬಸಪ್ಪ , ಸಿ.ಮಂಜುನಾಥ ಲೇಖಕರಾದ ವೀರೇಂದ್ರ ರಾವಿಹಾಳ್, ಪತ್ರಕರ್ತ ಮಲ್ಲಪ್ಪ , ಕವಿ ಅಜಯ ಬಣಕಾರ್ ಮತ್ತಿತರರು ಉಪಸ್ಥಿತರಿದ್ದರು.
—–