ವೃತ್ತಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿರುವ ವರಮಹಾಲಕ್ಷ್ಮಿ ಅವರು ಚಿಕ್ಕನಾಯಕನಹಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಸಂಚಾಲಕಿಯಾಗಿ, ಮಹಿಳಾ ಒಕ್ಕೂಟದ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದಾ ಮಹಿಳೆಯರ ಪ್ರಗತಿಯ ಬಗ್ಗೆ ತುಡಿಯುವ ಹಾಗೂ ಸುಂದರ ಆಶಯಗಳಿರುವ ಇವರ ಬಹುತೇಕ ಕವಿತೆಗಳಲ್ಲಿ ಮಹಿಳೆಯ ಬದುಕೇ ಕೇಂದ್ರಬಿಂದು. ವರಮಹಾಲಕ್ಷ್ಮಿ ಅವರ ‘ಅವಳಲ್ಲಿ ಪ್ರಾರ್ಥನೆ’ ಕವಿತೆ ಇಂದಿನ ‘ಅನುದಿನ ಕವನ’ ಕಾಲಂನಲ್ಲಿ!
ಅವಳಲ್ಲಿ ಪ್ರಾರ್ಥನೆ
ಅಂದು ನೀ ಅದೆಷ್ಟು
ನೊಂದು ಶಪಿಸಿದ್ದೆಯೋ
ನಿನ್ನ ನೋವಿನ ಕಣ್ಣೀರು
ಆವಿಯಾಗಿ ಸಕಲ ಋತುಮಾನಗಳಲ್ಲಿ
ಸೇರಿಕೊಂಡಿದೆ ಶಾಪವಾಗಿ
ನೆನಪಾದಾಗೆಲ್ಲಾ ನೆನಪುಗಳು ಕಣ್ಣತೇವರಿಸುವಂತೆ
ಇಲ್ಲಿ ಮತ್ತೆ ಮತ್ತೆ ಘಟಿಸುತ್ತಲೇ ಇವೆ
ಆ ಘಟನೆಗಳು.
ಸಂಖ್ಯೆಗೆ ಮಾತ್ರ ಮುಕ್ಕೋಟಿ ದೇವತೆಗಳು
ಪ್ರತ್ಯಕ್ಷವಾಗಲಿಲ್ಲ ಒಂದು
ದೇವತೆಯು ಹೆಣ್ಣ ಸಂತೈಸಲು
ಎತ್ತಲಿಲ್ಲ ಶಸ್ತ್ರಾಸ್ತ್ರಗಳ
ದುಷ್ಠರ ವಧಿಸಲು.
ಹೆಜ್ಜೆ ಹೆಜ್ಜೆಗೂ ನೋಡುತ್ತಿದ್ದೆ
ಬಾಯಿಬಿಟ್ಟು ನನ್ನ ನುಂಗಿ
ನನ್ನ ನಗ್ನದೇಹವ ಮುಚ್ಚುವಳೋ ಎಂದು
ಇಲ್ಲ ಬಾಯಿ ಬಿಡಲೇ ಇಲ್ಲ
ಧರಣಿಗೂ ದಿಗ್ಬಂಧನ ಇಲ್ಲಿ.
ನಡೆಯುತ್ತಲೇ ಮೊರೆಯಿಡುತ್ತಿದ್ದೆ
ಕೃಷ್ಣ ..ಕೃಷ್ಣ ಕೃಷ್ಣಾ ಎಂದು
ಸೀರೆಗಾಗಿ ಅಲ್ಲ
ಒಂದೇ ಒಂದು ಮಾರು
ಬಟ್ಟೆಗಾಗಿ
ನೀಡಲೇ ಇಲ್ಲ ಅವನು
ತಿಳಿಯಿತು
ಅವನಿಗೂ ಧರ್ಮದ ಪೊರೆ ಹೊದಿಸಿದ್ದಾರೆಂದು
ಗದ್ದುಗೆ ಏರಿದವರೆಲ್ಲಾ ದೃತರಾಷ್ಟ್ರನ ವಂಶಜರೇ
ಇನ್ನೆಲ್ಲಿಯ ಕರುಣೆಯ ನೋಟ!
ಬಂದುಬಿಡೆ ಅಕ್ಕ
ನೆಲಸಿಬಿಡು ಎಲ್ಲ ಹೆಣ್ಣುಗಳ ಎದೆಯೊಳಗೆ
ನಡೆದುಬಿಡಲಿ ಸ್ತ್ರೀ ಕುಲ ಭವದ ಮೋಹ ಕಳಚಿ
-ವರಮಹಾಲಕ್ಷಿ.ಟಿ ಆರ್, ಚಿಕ್ಕನಾಯಕನಹಳ್ಳಿ