ಅನುದಿನ ಕವನ-೧೧೩೫, ಕವಿ: ಅಮರೇಶ್ ನಾಗಲಾಪುರ, ರಾಯಚೂರು , ಕವನದ ಶೀರ್ಷಿಕೆ: ಹಣ್ಣೆಲೆ

ಹಣ್ಣೆಲೆ

ಹಣ್ಣೆಲೆ ನಾ ಉದುರುವ ಮುನ್ನ
ತಿಳಿದುಕೋ ನನ್ನ ಸಾರ್ಥಕ ಜೀವನವನ್ನ

ಓ ಮಾನವಾ

ನಾ ಚಿಗುರಿದಾಗ ವಾಸಂತವಾದೆ
ಪರಿಮಳ ಬೀರುವ ಹೂವಿನ ಜೊತೆಯಾದೆ

ರಸಭರಿತ ಹಣ್ಣಾಗಲು ನೆರವಾದೆ
ಎಲೆಯಾಗಿ ಸಕಲ ಜೀವ ರಾಶಿಗೆ ನೆರಳಾದೆ, ಉಸಿರಾದೆ

ಹಣ್ಣೆಲೆಯಾಗಿ ಉದುರಿ
ನನ್ನ ಬೆಳೆಸಿ ಪೋಷಿಸಿದ ಬೇರುಗಳಿಗೆ
ಗೊಬ್ಬರದ ಮರುಪೂರಣವಾದೆ

ನೀನಾರಿಗಾದೆ ಓ ಮಾನವ

ಕಾಮ ಕ್ರೋಧ ಮದ ಮೋಹ ಮತ್ಸರ ಲೋಭಗಳ ಮೆಟ್ಟಿ
ನಿನ್ನ ಬೆಳೆಸಿ ಉಳಿಸಿದ ಈ ಸಮಾಜಕ್ಕೆ
ಸಮ ಸಮಾಜದ ಆಶಯಕ್ಕೆ
ಶ್ರಮಿಸಿ ಋಣಮುಕ್ತನಾಗಲಾರೆಯಾ

ಓ ಮಾನವ

-ಅಮರೇಶ್ ನಾಗಲಾಪುರ, ರಾಯಚೂರು                        —–