ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ಜೀವನದಲ್ಲಿ ವಿದ್ಯಾರ್ಥಿಗಳು ಯಶ ಕಾಣ ಬೇಕು -ನ್ಯೂಸ್18 ಹಿರಿಯ ನಿರೂಪಕಿ ನವಿತಾ ಜೈನ್

ಸಿರುಗುಪ್ಪ, ಫೆ.13: ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿ, ಯುವ ಜನರು ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡು ಜೀವನದಲ್ಲಿ ಯಶ ಕಾಣ ಬೇಕು ಎಂದು ನ್ಯೂಸ್ 18 ಕನ್ನಡ ಸುದ್ದಿವಾಹಿನಿಯ ಹಿರಿಯ ನಿರೂಪಕಿ ನವಿತಾ ಜೈನ್ ಅವರು ತಿಳಿಸಿದರು.
ತಾಲ್ಲೂಕಿನ ತೆಕ್ಕಲಕೋಟೆ ಶ್ರೀಮತಿ ಹೊನ್ನೂರಮ್ಮ ದಿವಂಗತ ಸಿದ್ದಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಜರುಗಿದ ನೂತನ ಪತ್ರಿಕೋದ್ಯಮ, ಐಚ್ಚಿಕ ಆಂಗ್ಲ ವಿಭಾಗವನ್ನು ಉದ್ಘಾಟಿಸಿ, ಪತ್ರಿಕೋದ್ಯಮ ವಿಭಾಗದ ಪ್ರಾಯೋಗಿಕ ಪತ್ರಿಕೆ ‘ಯುವ ಸ್ಪೂರ್ತಿ’  ಬಿಡುಗಡೆಗೊಳಿಸಿ ಅವರು ಮಾತನಾಡಿದರು.


ತೆಕ್ಕಲಕೋಟೆಯಂತಹ ಗ್ರಾಮೀಣ ಪ್ರದೇಶದಲ್ಲಿ ಪತ್ರಿಕೋದ್ಯಮದೊಂದಿಗೆ  ಆಂಗ್ಲ ಭಾಷೆಯನ್ನು ಕಲಿಯುವ ಅವಕಾಶವನ್ನು ಕಾಲೇಜಿನ‌ ಪ್ರಾಚಾರ್ಯರು ಕಲ್ಪಿಸಿದ್ದಾರೆ. ಇದನ್ನು ಈ ಭಾಗದ ವಿದ್ಯಾರ್ಥಿಗಳು ಸದ್ಭಳಕೆ‌ ಮಾಡಿಕೊಂಡು ಬದುಕಿನಲ್ಲಿ ಮುಂದೆ ಬರಬೇಕು ಎಂದು ಕಿವಿಮಾತು ಹೇಳಿದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳು ಮಾಧ್ಯಮ ಲೋಕದಲ್ಲಿ ಯಶಸ್ಸು ಕಾಣಬೇಕಾದರೆ ಜ್ಞಾನ ಸಂಪಾದನೆಯ ಜತೆಗೆ ಪದ ಸಂಪತ್ತು, ಬರವಣಿಗೆ ಮತ್ತು ಭಾಷಾ ಕೌಶಲ್ಯವನ್ನು ರೂಢಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಸಲಹೆ ನೀಡಿದರು.
ಸಾಮಾಜಿಕ‌ ಜಾಲತಾಣಗಳ ಕೆಲವು ಮಾಹಿತಿಗಳು ಮಾಧ್ಯಮಗಳನ್ನೂ ದಾರಿ ತಪ್ಪಿಸುತ್ತವೆ ಎಂದು ಆತಂಕ‌ ವ್ಯಕ್ಯಪಡಿಸಿದ ನವಿತಾ ಜೈನ್ ಅವರು ಈ ಬಗ್ಗೆ ಎಚ್ಚರದಿಂದ ಇರಬೇಕು ಎಂದರು.
ಯಶಸ್ವಿ ನಿರೂಪಕರಾಗಲು ಭಾಷೆ ಶುದ್ಧವಾಗಿರಬೇಕು, ಸ್ಪಷ್ಟವಾಗಿ ಮಾತನಾಡಬೇಕು ಎಂದು ತಿಳಿಸಿದರು.


ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಅವರು,  ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಮಾತ್ರ ಪತ್ರಿಕೋದ್ಯಮವನ್ನು ಕಲಿಯಬಹುದು ಎಂಬ ಮಾತುಗಳನ್ನು ಪ್ರಾಚಾರ್ಯರಾದ ಡಾ.ಮಲ್ಲಿಕಾರ್ಜುನ ಮೋಕ ಅವರು ಸುಳ್ಳು ಮಾಡಿದ್ದಾರೆ.ಹೋಬಳಿ, ಗ್ರಾಮೀಣ‌ ಭಾಗದ ಮಕ್ಕಳು‌ ಪತ್ರಕರ್ತರಾಗುವ ಕನಸನ್ನು ನನಸು ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ಯಪಡಿಸಿದರು.
ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಮೋಕ ಅವರು ಮಾತನಾಡಿ ತಾವು ಕಾಲೇಜು ಪ್ರವೇಶ ಪಡೆದಾಗ ಪತ್ರಿಕೋದ್ಯಮ ಅಭ್ಯಾಸ ಮಾಡುವ ಅವಕಾಶ ಇರಲಿಲ್ಲ. ಹೀಗಾಗಿ ತಮ್ಮ ಕಾಲೇಜಿನಲ್ಲಿ ಈ ವಿಭಾಗವನ್ನು ಆರಂಭಿಸಿ ಗ್ರಾಮೀಣ ವಿದ್ಯಾರ್ಥಿಗಳು ವಿಶಿಷ್ಟ ವಿಷಯಗಳನ್ನು ಕಲಿಯಲು ಅವಕಾಶ ಕಲ್ಪಿಸಲಾಗಿದೆ. ನೂತನವಾಗಿ 2024-25 ನೇ ಶೈಕ್ಷಣಿಕ ವರ್ಷದಿಂದ ಪತ್ರಿಕೋದ್ಯಮ ಮತ್ತು ಇಂಗ್ಲಿಷ್ ವಿಭಾಗದ ಕೋರ್ಸ್ ಆರಂಭಿಸಲಾಗಿದೆ.  ಆಸಕ್ತಿ ಇರುವ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು ಎಂದು‌ ಹೇಳಿದರು.

   ಸನ್ಮಾನ: ಇದೇ ಸಂದರ್ಭದಲ್ಲಿ ನವಿತಾ ಜೈನ್, ಸಿದ್ದಪ್ಪ ಮತ್ತು ಸಿ.ಮಂಜುನಾಥ್ ಅವರನ್ನು ಕಾಲೇಜು ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.                      ವೇದಿಕೆಯಲ್ಲಿ  ಯುವ ಮುಖಂಡ ಸಿದ್ದಪ್ಪ,  ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವೈ. ಜನಾರ್ದನರೆಡ್ಡಿ, ಐಕ್ಯೂಎಸಿ ಸಂಚಾಲಕ ಡಾ. ಬಿ.ವಿರೇಶ್, ಸಹಾಯಕ ಪ್ರಾಧ್ಯಾಪಕ ಡಾ. ಜಗದೀಶ, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥೆ  ಡಾ ತೇಜಸ್ವಿನಿ, ಸಹಾಯಕ ಪ್ರಾಧ್ಯಾಪಕಿ ಎಸ್. ವರಲಕ್ಷ್ಮಿ ಉಪಸ್ಥಿತರಿದ್ದರು.
ಉಪನ್ಯಾಸಕರುಗಳಾದ ಡಿ.ಕುಮಾರಸ್ವಾಮಿ, ಸಿದ್ದೇಶ, ಮಾರಪ್ಪ ಎ.ಕೆ ವರಲಕ್ಷ್ಮಿ, ಸುಭಾನ್ ಸಾಬ್, ಡಾ.ರಾಜಣ್ಣ ಸೇರಿದಂತೆ ಭೋದಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
*****