ಅನುದಿನ ಕವನ-೧೧೪೩, ಕವಿ:ನಾಗೇಶ್ ಜೆ. ನಾಯಕ, ಸವದತ್ತಿ, ಕಾವ್ಯ ಪ್ರಕಾರ: ಗಜಲ್

ಗಜ಼ಲ್

ಉಕ್ಕುವ ದುಃಖದ ನೆತ್ತಿ ನೇವರಿಸಿದ್ದೇನೆ ಇನ್ನೆಂದೂ ಇದಿರಾಗಬೇಡ
ಸುರಿವ ಕಣ್ಣೀರಿನ ಕೆನ್ನೆ ತಟ್ಟಿದ್ದೇನೆ ಇನ್ನೆಂದೂ ಇದಿರಾಗಬೇಡ

ಮುರಿ ಮುರಿದು ಕಟ್ಟಿದ ಆಣೆ-ಪ್ರಮಾಣಗಳು ಮಕಾಡೆ ಮಲಗಿವೆ
ನಿನ್ನೆಡೆಗೆ ಹೊರಟ ಹೆಜ್ಜೆಗಳ ದಾರಿ ತಪ್ಪಿಸಿದ್ದೇನೆ ಇನ್ನೆಂದೂ ಇದಿರಾಗಬೇಡ

ಸಾವಿರ ಸಾವಿರ ನೆನಪುಗಳು ಕಮ್ಮಗೆ ಉರಿದು ಬೂದಿಯಾಗಿವೆ
ರಂಗಿನ ಕನಸುಗಳ ಗೋಣು ಹಿಚುಕಿದ್ದೇನೆ ಇನ್ನೆಂದೂ ಇದಿರಾಗಬೇಡ

ಸಾಕು ನಿನ್ನ ಹಸಿ ಹಸಿ ಸುಳ್ಳುಗಳ ಗೊಡವೆ ಹುಸಿ ಕಣ್ಣೀರ ಪ್ರಲಾಪ
ಅಳ್ಳೆದೆ ಕರಗದಂತೆ ಹೆಬ್ಬಂಡೆಯಾಗಿಸಿದ್ದೇನೆ ಇನ್ನೆಂದೂ ಇದಿರಾಗಬೇಡ

ನಿನ್ನ ರಮಿಸುವ ಎಲ್ಲಾ ಆಸೆಗಳು ಚೂರು ಚೂರಾಗಿ ಮಣ್ಣು ಪಾಲಾಗಿವೆ
ಮತ್ತೆ ಸೇರುವ ಹಂಬಲಕ್ಕೆ ಕೊನೆ ಹೇಳಿದ್ದೇನೆ ಇನ್ನೆಂದೂ ಇದಿರಾಗಬೇಡ

ಕ್ಷಣ ಕ್ಷಣಕ್ಕೂ ಬಣ್ಣ ಬದಲಿಸಿ ಕಣ್ಣು ತೇವಗೊಳಿಸುವ ಪಾತ್ರದವಳು ನೀನು
ಹಚ್ಚಿಟ್ಟ ಒಲವ ದೀಪ ಹೊತ್ತದಂತೆ ಆರಿಸಿಬಿಟ್ಟಿದ್ದೇನೆ ಇನ್ನೆಂದೂ ಇದಿರಾಗಬೇಡ


-ನಾಗೇಶ್ ಜೆ. ನಾಯಕ, ಸವದತ್ತಿ
—–