ಪ್ರೇಮ
ಬಹಳ ಹಿಂದಿನಿಂದಲೂ ಪ್ರೀತಿಸುತ್ತಿದ್ದಾನೆ
ಅವನು ನನ್ನನ್ನು
ಮತ್ತೆ ನಾನು ಅವನನ್ನು
ಪರಸ್ಪರ ಭೇಟಿಯಾಗುವ ತನಕವೂ
ಪ್ರೇಮ ಹಾಗೇ ಉಳಿದಿರುತ್ತದೆ
ನಂತರ ಅಂತರ ಶುರುವಾಗುತ್ತದೆ
ಎಂಬ ಭಯವನ್ನು ಕಟ್ಟಿಕೊಂಡು
ಪ್ರೀತಿಯ ಸಮುದ್ರಕ್ಕೆ ಬಿದ್ದವಳು ನಾನು
ನಿರಂತರ ಈಜು ನಡೆದೇ ಇದೆ
ಅನತಿದೂರದಲ್ಲಿ ನನ್ನನ್ನೇ ಗುರಿಯಾಗಿಸಿ ಅವನೂ
ಕೈ ಕಾಲು ಬಡಿಯುತ್ತಿದ್ದಾನೆ..
ಒಮ್ಮೆ ಗಟ್ಟಿಯಾಗಿ ತಬ್ಬಿ ಮುತ್ತಿಡಬೇಕು ಹಣೆಗೆ
ಗಲ್ಲ ಸವರಿ ಗಿಲ್ಲಬೇಕು
ಸಾವಿರ ಲಲ್ಲೆಮಾತುಗಳ ಉಸುರಬೇಕು ಕಿವಿಯಲ್ಲಿ
ಮೀಸೆಯ ತುದಿಗೊಂದು ರಂಗೋಲಿ ಹುಂಡು
ಇಡಬೇಕು
ಹೀಗೆ ಹತ್ತು ಹಲವು ಯೋಜನೆಗಳಿವೆ
ನನ್ನಲ್ಲಿ
ಪಟ್ಟಿ ಬೆಳೆಯುತ್ತಲೇ ಇದೆ ನಿರಂತರ
ಮುದ್ದು ಕರಡೀ….
ನೋಡುತ್ತಿರು
ನಿನ್ನ ಬೆನ್ನಿಗೊಂದು ನೀಲಿಚಿಟ್ಟೆಯ ಹಚ್ಚೆ ಹಾಕಿಯೇ
ನಾನು ಸಾಯುವುದು
ಹಾಗೇ ಹೆರಳಿಗೊಂದು ಗೊಂಡೆ ಹೂವ್ವಿನ ಚಂಡು
ಮುಡಿಸುವುದು
ಹರಿವ ನದಿಯಂಚಿಗೆ ಇಳಿಬಿಟ್ಟ ನಿನ್ನ ಪಾದಗಳಿಗೆ
ಮುದ್ದಿಕ್ಕುವ ಪುಟ್ಟ ಮೀನುಮರಿಗಳನ್ನು
ಹುಶ್..! ಹುಶ್..! ಎಂದು ಓಡಿಸುವುದು
ಎಲೆ ಉದುರಿಸುವ ಕಾಡುಗಳ ಬಗಲಲ್ಲಿ ಕುಳಿತು
ನೀನು ಒಪ್ಪಿಗೆ ಕೊಟ್ಟರೆ
ತುಂಬು ಸ್ತನಗಳ ಬೊಗಸೆಯಲ್ಲಿ ಹಿಡಿದು
ಒಂದು ಮುತ್ತಿಕ್ಕುವುದು
ಇಷ್ಟೇ ಆಸೆ
“ಯಾವಾಗ ಸಿಗುತ್ತೀ ಹೇಳು…?”
ಇದೊಂದೇ ಮಾತು ಅವನದ್ದು
ಒಂದು ಮೋಂಬತ್ತಿ ಮೆರವಣಿಗೆಯಲ್ಲಿ
ಇನ್ಯಾರದ್ದೋ ಶವಯಾತ್ರೆಯಲ್ಲಿ
ಮತ್ಯಾವುದೋ ತೀವೃ ಪರಿಹಾರ
ಕಾರ್ಯಾಚರಣೆಯ ಸಂದರ್ಭದಲ್ಲಿ
ಗಂಭೀರ ಅಥವಾ ದುಃಖಿತ ಮುಖ ಹೊತ್ತು
ಮುಖಾಮುಖಿಯಾದದ್ದು ಬಿಟ್ಟರೆ ನಮಗಾಗಿಯೇ
ನಾವು ಸಿಕ್ಕಿಕೊಂಡದ್ದೇ ಇಲ್ಲ
ಭೇಟಿ ಆಗಲೇಬೇಕೆಂದು ಹೊರಟಾಗಲೆಲ್ಲ
ಏನಾದರೂ ಒಂದು ಆಗುತ್ತದೆ
ಮತ್ತೆ ಮುಲಾಕಾತ್ ಮುಂದಕ್ಕೆ ಬೀಳುತ್ತದೆ
ಉದಾಹರಣೆಗಾಗಿ ಹೇಳುತ್ತೇನೆ
ಮೊನ್ನೆ ಅವನನ್ನು ನೋಡಲು ಹೊರಟಾಗ
ಅವನ ಎರಡನೆಯ ಮಗು ಬಿದ್ದು ಕಾಲಿಗೆ
ಪೆಟ್ಟುಮಾಡಿಕೊಂಡಿತಂತೆ
ಅವನು ನನ್ನನ್ನು ನೋಡಲು ಬರುವಾಗಲೂ ಕೂಡ
ಹವಾಮಾನ ವೈಪರೀತ್ಯದಿಂದಾಗಿ ಪ್ಲೈಟು
ರದ್ದಾಯಿತಂತೆ
ಮತ್ತೇನು ಮಾಡುವುದು
ಅಲ್ಲಿ ಇಲ್ಲಿ ಸುತ್ತಿ
ವಾಪಸ್ಸು ಬರುವುದಾಯಿತು ನನಗೆ
ಎರಡೂ ಸಾರ್ತಿ
ಸದ್ಯ ಸಣ್ಣದರಲ್ಲೇ ಬಚಾವಾದೆವು
ನಾವು ನಮ್ಮ ಪ್ರೇಮವನ್ನು
ಚನ್ನಾಗಿ ಸಂಭಾಳಿಸಿಕೊಳ್ಳುವುದನ್ನು
ಕಲಿತಿದ್ದೇವೆ
-ರೇಣುಕಾ ರಮಾನಂದ, ಅಂಕೋಲಾ
——-