ಬಳ್ಳಾರಿ, ಫೆ.22: ವಿದ್ಯಾರ್ಥಿ, ಯುವ ಜನರು ಉದ್ಯೋಗ ಹುಡುಕುವ ಬದಲು ಉದ್ಯೋಗದಾತರಾಗಬೇಕು ಎಂದು ಮಹಾನಗರ ಪಾಲಿಕೆಯ ಸದಸ್ಯ ಎಂ.ಪ್ರಭಂಜನಕುಮಾರ್ ಅವರು ಹೇಳಿದರು.
ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿದ್ದ ಪುನರ್ ಮನನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಸಂದರ್ಭದಲ್ಲಿ ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಪ್ರತಿ ವರ್ಷ ಒಂದು ಕೋಟಿ ಇಪ್ಪತ್ತೈದು ಲಕ್ಷ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಹುಡುಕುತ್ತಾರೆ. ಆದರೆ ಈ ಪೈಕಿ ಕೇವಲ 25 ರಿಂದ 30 ಲಕ್ಷ ಜನರಿಗೆ ಮಾತ್ರ ಉದ್ಯೋಗ ಸಿಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಅದೂ ಕೂಡ ಅಷ್ಟೂ ಜನರಿಗೆ ನಿರೀಕ್ಷಿಸಿದಷ್ಟು ಸಂಬಳ, ಸವಲತ್ತು, ಉದ್ಯೋಗ ಭದ್ರತೆ ಸಿಗುವುದಿಲ್ಲ. ಹೀಗಾಗಿ ಈ ಸ್ಪರ್ಧಾ ಜಗತ್ತಿನಲ್ಲಿ ಅರ್ಹತೆ ಗಳಿಸುವುದು ಸುಲಭವಾದ ವಿಷಯವಲ್ಲ ಎಂದು ಆತಂಕ ವ್ಯಕ್ತಪಡಿಸಿದ ಅವರು ಯುವ ಸಮೂಹ ಉದ್ಯಮಶೀಲರಾಗುವ ಮೂಲಕ ಉದ್ಯೋಗದಾತರಾಗಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಭವಿಷ್ಯತ್ತಿನಲ್ಲಿ ಉತ್ತಮ ಬದುಕು ನಿರ್ಮಿಸಿಕೊಳ್ಳುವ ಇಚ್ಚೆ ಇದ್ದರೆ ವರ್ತಮಾನದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಯಾವುದೇ ವ್ಯಕ್ತಿಯ ಬದುಕಿನಲ್ಲಿ ಬಾಲ್ಯಾವಸ್ಥೆಯಲ್ಲಿ ಸರಿಯಾದ ಪೋಷಣೆ ಸಿಕ್ಕರೆ ಹೇಗೆ ಆರೋಗ್ಯವಂತರಾಗುತ್ತಾರೋ, ಅದೇ ರೀತಿ 15 ರಿಂದ 25 ವರ್ಷದವರೆಗಿನ ಅವಧಿಯು ವೃತ್ತಿ ಬದುಕು ಹಾಗೂ ವ್ಯಕ್ತಿತ್ವ ರೂಪಿಸುವ ಪ್ರಮುಖ ಘಟ್ಟವಾಗಿದೆ. ಹೀಗಾಗಿ ಪದವಿ ವ್ಯಾಸಂಗ ಮಾಡುತ್ತಿರುವ ತಾವು ಜವಾಬ್ದಾರಿಯುತವಾಗಿ ನಿಮ್ಮ ವ್ಯಕ್ತಿತ್ವ ರೂಪಿಸಿಕೊಂಡು ಉತ್ತಮ ಭವಿಷ್ಯಕ್ಕೆ ಬುನಾದಿ ಹಾಕಿಕೊಳ್ಳಬೇಕು ರಂದು ಪ್ರಭಂಜನ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಇಂದಿನ ಕಾರ್ಯಕ್ರಮದ ಪ್ರೇರಕ ಶಕ್ತಿಯಾಗಿರುವ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರನ್ನು ವಿದ್ಯಾರ್ಥಿಗಳು ಮಾದರಿಯಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಕಾಲೇಜು ಪರಿಚಯ ಪುಸ್ತಿಕೆ ಬಿಡುಗಡೆಗೊಳಿಸಿದ ವ್ಯಕ್ತಿತ್ವ ವಿಕಸನ ತರಬೇತುದಾರ ಟಿ.ವಿಶ್ವನಾಥ್ ಅವರು ವಿಶೇಷ ಉಪನ್ಯಾಸ ನೀಡಿದರು. ಕಾಲೇಜು ಆಡಳಿತ ಮಂಡಳಿ ಸದಸ್ಯರೂ ಆಗಿರುವ ನಿವೃತ್ತ ಸರ್ಕಾರಿ ಅಭಿಯೋಜಕ ಜಯರಾಂ ಅವರು, ಯುವ ಜನರು ಮೊಬೈಲ್ ವ್ಯಸನಕ್ಕೆ ಅಂಟಿಕೊಳ್ಳುತ್ತಿರುವುದು ಒಳ್ಳೆಯ ಲಕ್ಷಣವಲ್ಲ ಎಂದರು. ಉತ್ತಮ ಕಾಲೇಜಿನಲ್ಲಿ ಓದುತ್ತಿರುವ ನೀವೆಲ್ಲಾ ಸತ್ಪ್ರಜೆಗಳಾಗುವ ಮೂಲಕ ನಾಡಿಗೆ ಕೀರ್ತಿ ತರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಹೆಚ್.ಕೆ.ಮಂಜುನಾಥರೆಡ್ಢಿ ಅವರು ಮಾತನಾಡಿದರು.
ವಿಶೇಷ ಉಪನ್ಯಾಸ: ವ್ಯಕ್ತಿತ್ವ ವಿಕಸನ ತರಬೇತುದಾರ ಟಿ.ವಿಶ್ವನಾಥ್ ಅವರು ವಿಶೇಷ ಉಪನ್ಯಾಸ ನೀಡಿದರು.
ವಾದ್ಯ ಸಂಗೀತ: ರಾಯಚೂರಿನ ರಘುಪತಿ ಪೂಜಾರ್ ಅವರ ಕ್ಲಾರಿಯೊನೇಟ್ ವಾದನ ಗಮನ ಸೆಳೆಯಿತು. ಸಿಂಧನೂರಿನ ಅಮರೇಗೌಡ ಗವಾಯಿ ಹಾರ್ಮೋನಿಯಂ ಸಾಥ್ ನೀಡಿದರೆ, ಗಣಪತಿ ಪೂಜಾರ್ ತಬಲ ಸಾಥ್ ನೀಡಿದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಸ್.ಕೆ.ಸಲ್ಮಾ, ವಿಶ್ವನಾಥ ನಾಯ್ಕ, ರೇಷ್ಮಾ, ಪಾಲಿಕೆ ಸದಸ್ಯ ನೂರ್ ಮೊಹಮ್ಮದ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಕಾಲೇಜು ಅಭಿವೃದ್ಧಿ ಸಮಿತಿ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸನ್ಮಾನ: ಪಾಲಿಕೆ ಸದಸ್ಯ ಪ್ರಭಂಜನಕುಮಾರ್ ಅವರಿಗೆ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಸಹ ಪ್ರಾಧ್ಯಾಪಕಿ ಡಾ. ಪಲ್ಲವಿ ಸ್ವಾಗತಿಸಿದರು. ರಾಜ್ಯಶಾಸ್ತ್ರ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಹೊನ್ನೂರಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರಸಾಬ ದಿನ್ನಿ ನಿರೂಪಿಸಿದರು. ಕಾಲೇಜು ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಡಾ. ಶಶಿಕಾಂತ್ ವಂದಿಸಿದರು.
ಸಹ ಪ್ರಾಧ್ಯಾಪಕರಾದ ಡಾ.ಸಿ ಎಚ್. ಸೋಮನಾಥ್, ರಾಮಾಂಜನೇಯ, ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಪಂಪನಗೌಡ, ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷ ಡಾ.ಟಿ ದುರುಗಪ್ಪ ಸೇರಿದಂತೆ ವಿವಿಧ ವಿಭಾಗಗಳ ಸಹ, ಸಹಾಯಕ ಪ್ರಾಧ್ಯಾಪಕರು, ಉಪನ್ಯಾಸಕರು, ಸಿಬ್ಬಂದಿಗಳು, ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
—–