ಬಳ್ಳಾರಿ , ಫೆ 24: ಅಭಿನಯ ಮನುಷ್ಯ ಕಂಡುಕೊಂಡ ಜೀವಂತ ಕಲೆ ಎಂದು ಹಿರಿಯ ನಾಟಕಕಾರರಾದ ಬೆಂಗಳೂರಿನ ಡಾ.ವಿಜಯಾ ಸುಬ್ಬರಾಜು ಹೇಳಿದರು. ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜು ಸಭಾಂಗಣದಲ್ಲಿ ಶನಿವಾರ ಕಾರಂತ ರಂಗಲೋಕ ಆಯೋಜಿಸಿದ್ದ ‘ ಕಾರಂತ ಸಾಹಿತ್ಯ ರತ್ನ -2023 ‘ ರಾಜ್ಯಮಟ್ಟದ ಪುಸ್ತಕ ಪ್ರಶಸ್ತಿ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು. ರಂಗಭೂಮಿ ಸಮಾಜದ ನಿತ್ಯ ಘಟನೆಗಳಿಗೆ ಮುಖಾಮುಖಿಯಾಗುತ್ತಲೇ ಸಂಸ್ಕಾರವನ್ನು , ಮಾನವೀಯ ಮೌಲ್ಯಗಳನ್ನು ಕಟ್ಟಿ ಕೊಡುವಂತಹ ಸಶಕ್ತವಾದ ಮಾಧ್ಯಮ ಎಂದು ಅವರು ಅಭಿಪ್ರಾಯ ಪಟ್ಟರು. ಪ್ರಸ್ತುತ ಪ್ರೇಕ್ಷಕರ ಅಭಿರುಚಿ ಮನೋಭಾವಗಳು ಬದಲಾಗಿವೆ .ಕಲಾವಿದರಲ್ಲೂ ನಿಷ್ಠೆ ,ಕಲಾಪ್ರಜ್ಞೆ ಕಡಿಮೆಯಾಗಿದೆ ಎಂದು ವಿಷಾದಿಸಿದರು. ವಿದ್ಯಾರ್ಥಿ ಜೀವನದಲ್ಲಿ ಮೊಟ್ಟ ಮೊದಲಿಗೆ ಅಭಿನಯಕ್ಕಾಗಿ ನಾನು ಮುಖಕ್ಕೆ ಬಣ್ಣ ಹಚ್ಚಿಕೊಂಡಾಗ ಮನೆಯಲ್ಲಿ ಎಲ್ಲರೂ ಅಸಹಕಾರ ವ್ಯಕ್ತಪಡಿಸಿದರು. ನನ್ನಲ್ಲಿರುವ ರಂಗ ಪ್ರೀತಿ, ಮನೋಸ್ಥೈರ್ಯದಿಂದಾಗಿ ಹೆಚ್ಚು ನಾಟಕಗಳನ್ನು ಬರೆಯಲು ಮತ್ತು ಅಭಿನಯಿಸಲು ಸಾಧ್ಯವಾಯಿತು ಎಂದರು. ಮತ್ತೋರ್ವ ಪ್ರಶಸ್ತಿ ಪುರಸ್ಕೃತ ನಾಟಕಕಾರ ಬೇಲೂರು ರಘುನಂದನ ಮಾತನಾಡಿ ಹೊಸ ತಲೆಮಾರು ಅಭಿನಯ ಮತ್ತು ಸಾಹಿತ್ಯದ ಕಡೆ ಹೆಚ್ಚು ಮುಖ ಮಾಡಿದಾಗ ಹೊಸ ಸಮಾಜ ನಿರ್ಮಾಣವಾಗಲು ಸಾಧ್ಯ. ಹೊಸಬರು ಈ ಕ್ಷೇತ್ರಕ್ಕೆ ಬರುವಾಗ ಭ್ರಮೆಗಳ ಬದಲಿಗೆ ಕನಸುಗಳನ್ನು ಕಟ್ಟಿಕೊಳ್ಳಬೇಕಾಗಿದೆ. ನಾಡಿನುದ್ದಕ್ಕೂ ರಂಗ ಚಟುವಟಿಕೆಗಳು ನಿಂತ ನೀರಾಗದೆ ಕ್ರಿಯಾಶೀಲವಾಗಿ ನಡೆಯುತ್ತಿರುವುದು ನಾವೆಲ್ಲರೂ ಹೆಮ್ಮೆ ಪಡಬೇಕಾದ ಸಂಗತಿ ಎಂದು ಸಂತಸ ವ್ಯಕ್ತಪಡಿಸಿದರು. ಇನ್ನೋರ್ವ ಪ್ರಶಸ್ತಿ ಪುರಸ್ಕೃತರಾದ ಕಾವ್ಯ ಕಡಮೆಯವರ ಮಾತುಗಳನ್ನು ಓದಿದ ಅವರ ತಂದೆ ಪ್ರಕಾಶ ಕಡಮೆ ‘ನಾಟಕವನ್ನು ಬರೆಯುವ , ತಂಡದವರು ಅಭಿನಯಿಸುವ, ಪ್ರೇಕ್ಷಕರು ನೋಡುವ ಆ ಪಯಣದಲ್ಲಿ ಹೆಚ್ಚು ಮನುಷ್ಯರಾಗುತ್ತೇವೆ. ಅಂತಲೇ ಭರವಸೆಯಿದೆ ನನಗೆ .ಈ ರಂಗ ಪಯಣದಲ್ಲಿ ನಮ್ಮೊಳಗಿನ ಏನೋ ಒಂದು ಕಟ್ಟು ಸಡಿಲಗೊಳ್ಳುತ್ತದೆ. ನಮ್ಮನ್ನು ಇನ್ನಷ್ಟು ಮೃದುವಾಗಿಸುತ್ತದೆ .ನಮ್ಮ ಒಳಗನ್ನು ಬೆಳಗುತ್ತದೆ ‘ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಶ್ರಾಂತ ಉಪನ್ಯಾಸಕಿ ಸುಶೀಲಾ ಶಿರೂರ ಅವರು, ಬಳ್ಳಾರಿಯಲ್ಲಿ ರಂಗ ಚಟುವಟಿಕೆಗಳು ಹೆಚ್ಚೆಚ್ಚು ನಡೆಯುತ್ತಿವೆ. ಅದರಲ್ಲೂ ಕಾರಂತ ರಂಗಲೋಕ ಕೊಡ ಮಾಡುವ ಈ ಪ್ರಶಸ್ತಿ ನಿಜವಾದ ಪ್ರತಿಭಾವಂತ ಸಾಧಕರನ್ನು ಗೌರವಿಸುವ ಸ್ತುತ್ಯಾರ್ಹವಾದ ಕೆಲಸವಾಗಿದೆ ಎಂದರು. ಶಿವಕುಮಾರ್ ತಾತನವರ ವಚನಗಳು ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಡಾ .ದಸ್ತಗೀರಸಾಬ್ ದಿನ್ನಿ ಈ ಕೃತಿಯಲ್ಲಿ ಸುಡುವ ವರ್ತಮಾನದ ತಲ್ಲಣಗಳಿವೆ. ಅನ್ಯಾಯ ,ಮೋಸ , ಅಸಮಾನತೆಯ ವಿರುದ್ಧ ಚಾಟಿ ಏಟನ್ನು ಕೊಟ್ಟಿರುವ ಲೇಖಕರು ಕೃತಿಯುದ್ದಕ್ಕೂ ವೈಚಾರಿಕ ಪ್ರಜ್ಞೆಯನ್ನು , ಜೀವಪರ ನಿಲುವುಗಳನ್ನು ಮೆರೆದಿದ್ದಾರೆ ಎಂದು ಹೇಳಿದರು. ಸಹಾಯಕ ಪ್ರಾಧ್ಯಾಪಕ ಡಾ.ಶಶಿಕಾಂತ ಬಿಲ್ಲವ್ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದ ಸದುಪಯೋಗವನ್ನು ಪಡಿಸಿಕೊಂಡು ಸಾಂಸ್ಕೃತಿಕ ಪ್ರೀತಿಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಹೆಚ್.ಕೆ. ಮಂಜುನಾಥ ರೆಡ್ಡಿ , ದಿವ್ಯ ಸಾನಿಧ್ಯವನ್ನು ಡಾ.ಶಿವಕುಮಾರ ತಾತ ವಹಿಸಿದ್ದರು. ಹಿರಿಯ ಮೇಕಪ್ ಕಲಾವಿದರಾದ ಮುತ್ಯಾಲಂ ಶ್ರೀ ರಾಮುಲು ಅವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾರಂತ ರಂಗಲೋಕದ ಅಧ್ಯಕ್ಷ ಕೆ .ಮಹೇಂದ್ರ ,ಕಾರ್ಯದರ್ಶಿ ಆರ್ .ಪಿ ಮಂಜುನಾಥ್, ಅಧ್ಯಾಪಕರಾದ ಕಲ್ಯಾಣ ಬಸವ, ಕೆ.ಬಸಪ್ಪ , ಡಾ.ಅಣ್ಣಾಜಿ ಕೃಷ್ಣಾರೆಡ್ಡಿ, ವಿಷ್ಣು ಹಡಪದ ,ನೇತಿ ರಘುರಾಂ , ಎರೆಪ್ಪ , ಯುನಿಸ್ ಅಲ್ಲಮನ ಊರು ,ರಂಗಪ್ರೇಮಿ ಬಸವರಾಜ ಬಿಸ್ಲಳ್ಳಿ , ಲೇಖಕ ಮಂಜುನಾಥ ರೆಡ್ಡಿ, ವೀರೇಂದ್ರ ರಾವಿಹಾಳ್ ಮತ್ತಿತರರು ಉಪಸ್ಥಿತರಿದ್ದರು.