ಬಯಲು
ಮುಗಿಲು ಹರಿದು ಸುರಿದರೇನು ಕಾರ್ಮೋಡಗಳು ಕರಗಲೇ ಬೇಕು||
ಗುಡುಗು ಸಿಡಿಲು ಆರ್ಭಟಿಸಿದರೇನು ಬಟ್ಟ ಬಯಲಾಗಲೇ ಬೇಕು||
ಪಾಜಿ ಮುಟ್ಟುವ ಗುರಿ ಒಂದೇ ಆಗಿರಲು ದಾರಿಗಳು ಎಷ್ಟಾದರೂ ಇರಲಿ|
ನದಿಯು ಸೊಕ್ಕಿ ಸಿಕ್ಕ ಕಡೆಗೆ ಹರಿದರೇನು ಹೋಗಿ ಸಾಗರ ಸೇರಲೇ ಬೇಕು|
ಹಸಿ ಬಿಸಿಯ ಕಾಯ ಮಾಗಿ ಹಣ್ಣಾಗುವುದು ಈ ನಿಸರ್ಗ ನಿಯಮ|
ಹುಣ್ಣಿಮೆ ಕಂಡ ಕಡಲು ಉಕ್ಕಿದರೇನು ಮತ್ತೆ ಹಿಂದೆ ಸರಿಯಲೇ ಬೇಕು||
ದುಃಖ ದುಮ್ಮಾನಗಳು ಶಾಶ್ವತವಲ್ಲ ಸುಖದ ಸುಪ್ಪತ್ತಿಗೆ ದೊರಕೇ ದೊರಕುವುದು|
ಬಿರುಗಾಳಿ ಬೀಸಿ ರುದ್ರ ನರ್ತನ ಮಾಡಿದರೇನು ಮತ್ತೆ ಶಾಂತವಾಗಲೇ ಬೇಕು||
‘ಗಟ್ಟಿಸುತ’ ಪಟ್ಟು ಬಿಡದೇ ದಿಟ್ಟತನದ ಹೆಜ್ಜೆ ಒಮ್ಮೆ ಇಟ್ಟು ನೋಡು|
ಕಷ್ಟಗಳು ಎಷ್ಟು ಬಂದು ಹೋದರೇನು ಮತ್ತೆ ಸುಖ ಹುಡುಕಿ ಬರಲೇ ಬೇಕು||
-ಎಂ.ಡಿ.ಬಾವಾಖಾನ ಸುತಗಟ್ಟಿ. ಬೆಳಗಾವಿ ಜಿ.
—–