ಅನುದಿನ‌ ಕವನ-೧೧೫೪, ಹಿರಿಯ ಕವಿ: ಎಂ. ಎಸ್.ರುದ್ರೇಶ್ವರಸ್ವಾಮಿ, ಬೆಂಗಳೂರು, ಕವನದ ಶೀರ್ಷಿಕೆ: ಅಜ್ಜಿ

ಅಜ್ಜಿ

ನೆನಪು ಮಾಡಿಕೊಳ್ಳುತ್ತಿರುತ್ತೇನೆ
ನನ್ನ ಅಜ್ಜಿಯನ್ನು.

ಅಜ್ಜಿ ತೀರಿಹೋಗಿ ಅದೆಷ್ಟೋ
ವರ್ಷಗಳಾದವು; ನಾವೆಲ್ಲ ಅಜ್ಜಿಯನ್ನು
ಅವ್ವ ಎಂದು ಕರೆಯುತ್ತಿದ್ದೆವು.
ಹಾಗೆ ಕರೆಯುವುದಕ್ಕೆ
ಬೇರೊಂದು ಕಥೆಯೇ ಇದೆ.

ಅದೆಲ್ಲ ಇರಲಿ;
ಇನ್ನೊಮ್ಮೆ ಹೇಳುವೆ, ಅದೊಂದು
ನೀಳ್ಗಥೆ.

ಯಾಕೆ ಅಜ್ಜಿ ಆಗೀಗ ನೆನಪಾಗುತ್ತಾಳೆಂದು ಕೇಳಿಕೊಳ್ಳುತ್ತೇನಾದರೂ
ನಿಖರವಾದ ಕಾರಣ ಹೊಳೆಯುವುದೇ
ಇಲ್ಲ.

ನನ್ನವ್ವ ಒಮ್ಮೆ ಏನೋ ಅಂದಳೆಂದು
ಅಜ್ಜಿ
ಕೊನೆವರೆಗೂ ಒಪ್ಪತ್ತು ಉಣ್ಣುತ್ತಿದ್ದಳು
ಹಬ್ಬ, ಸಂಭ್ರಮ
ಏನೇ ಇರಲಿ ರಾತ್ರಿ ಉಪವಾಸ;
ಹೋಳಿಗೆ ಮಾಡಿ ತಾನು ಉಣ್ಣದೆ
ಹೊರಗೆ ಕಟ್ಟೆಯ ಮೇಲೆ ಎಲೆ ಅಡಿಕೆ
ಜಗಿಯುತ್ತ
ಅದೇನೋ ನೆನೆಯುತ್ತಿದ್ದಳು.

ಅಪ್ಪ ನನಗೆ ಸೊಪ್ಪೆ ದಂಟಿನಿಂದ
ಹೊಡೆದಾಗಲೆಲ್ಲ
ನನ್ನಜ್ಜಿಯ ಮಡಿಲೇ ನನಗೆ ಆಸರೆ ನೀಡಿದ್ದು;
ಆ ಸೀರೆಯ ಸೆರಗಲ್ಲೆ ಮುಖ
ಮರೆಸಿಕೊಳ್ಳುತ್ತಿದ್ದದ್ದು.

ಈಗಲೂ ನಾನು ದಿಕ್ಕೆಟ್ಟು
ಅಸಹಾಯಕ
ಅನ್ನಿಸಿದಾಗ, ಅಜ್ಜಿ ನೆನಪಾಗುತ್ತಾಳೆ ಎನ್ನುವ ಗುಮಾನಿಯಿದೆ.

ಅಜ್ಜಿ ಹೇಳುತ್ತಿದ್ದಳು:
ಅವಳಿಗೆ ಎಂದೂ ಕನಸಾಗುತ್ತಿರಲಿಲ್ಲವೆಂದು;
‘ಏನು ಕನಸೋ
ಎಂಥದ್ದೋ, ನನಗೆ ನೆನಪೇ ಇರುವುದಿಲ್ಲ’

ಹೀಗೆ, ಕನಸುಗಳೇ ಇಲ್ಲದ ಅವಳ ಬದುಕು ಯಾರಿಗೂ ಅರ್ಥವಾಗಲಿಲ್ಲ
ಎಂದೂ ತನ್ನ ನೋವು ಹಂಚಿಕೊಳ್ಳದ
ಅವಳು
ಬೇರೆಯವರ ಸಂಕಟಗಳಿಗೆ ಮರುಗುತ್ತಿದ್ದಳು.

ಅವಳ ಎದೆಯಲ್ಲಿ
ಅವರೆಲ್ಲರ ನೋವಿನ ನಲಿವಿನ ಕಥೆಗಳಿದ್ದವು.

-ಎಂ. ಎಸ್.ರುದ್ರೇಶ್ವರಸ್ವಾಮಿ, ಬೆಂಗಳೂರು
——-