ಬಳ್ಳಾರಿ, ಮಾ.5: ಹಂಪಿ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಕೆ ಎಂ ಮೇತ್ರಿ ಅವರು ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ(ವಿ.ಎಸ್.ಕೆ.ವಿವಿ) ನೂತನ ಕುಲಪತಿಗಳಾಗಿ ನೇಮಕಗೊಂಡಿದ್ದಾರೆ.
ಕರ್ನಾಟಕ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮಂಗಳವಾರ ಡಾ. ಮೇತ್ರಿ ಅವರನ್ನು ನಾಲ್ಕು ವರ್ಷಗಳ ಅವಧಿಗೆ ವಿ.ಎಸ್.ಕೆ. ವಿವಿಯ ಕುಲಪತಿಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದಾರೆ.
ಪರಿಚಯ: ಕಲ್ಯಾಣ ಕರ್ನಾಟಕದ ಬೀದರ್ ಮೂಲದ ಡಾ ಕೆ ಎಂ ಮೇತ್ರಿ ಅವರು ಕಳೆದ ಎರಡೂವರೆ ದಶಕಗಳಿಂದ ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕರಾಗಿ, ದೂರಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿ, ಡೀನ್ ರಾಗಿ ಕಾರ್ಯನಿರ್ವಹಿಸಿದ್ದಾರೆ. ವಿವಿಯ ಬುಡಕಟ್ಟು ಅಧ್ಯಯನ ವಿಭಾಗದ ಮುಖ್ಯಸ್ಥರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.
ನಾಡಿನ ಅಲೆಮಾರಿ , ಅರೆಅಲೆಮಾರಿ ಸಮುದಾಯಗಳ ಅಭಿವೃದ್ಧಿ, ಸಂಘಟನೆಗಾಗಿ ಕಳೆದ ಮೂರು ದಶಕಗಳಿಂದ ಡಾ. ಮೇತ್ರಿ ಅವರು ಶ್ರಮಿಸುತ್ತಿದ್ದಾರೆ.
ಬಳ್ಳಾರಿ ಹೊರವಲಯದ ಗುಡಾರ ನಗರ ನಿರ್ಮಾಣದಲ್ಲಿ ಅಂದಿನ ಜಿ.ಪಂ ಸಿಇಓ ಹರ್ಷಗುಪ್ತ ಮತ್ತು ಡಾ. ಮೇತ್ರಿ ಅವರ ವಿಶೇಷ ಕಾಳಜಿ, ಪಾತ್ರವಿದೆ.
ಮಾ.6ರಂದು ಅಧಿಕಾರ ಸ್ವೀಕಾರ: ಬಳ್ಳಾರಿ ವಿವಿಯ ನೂತನ ಕುಲಪತಿಗಳಾಗಿ ಬುಧವಾರ ಮಧ್ಯಾಹ್ನ ಡಾ.ಕೆ.ಎಂ. ಮೇತ್ರಿ ಅವರು ಅಧಿಕಾರ ಸ್ವೀಕರಿಸುವರು ಎಂದು ಅಧಿಕೃತ ಮೂಲಗಳು ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ತಿಳಿಸಿವೆ.
ಅಭಿನಂದನೆಗಳ ಮಹಾಪೂರ: ಸರಳ, ಸಜ್ಜನಿಕೆಯ ಡಾ. ಮೇತ್ರಿ ಅವರು ಬಳ್ಳಾರಿ ವಿ.ಎಸ್.ಕೆ ವಿವಿಯ ಕುಲಪತಿಗಳಾಗಿ ನೇಮಕವಾಗಿರುವ ಮಾಹಿತಿ ತಿಳಿಯುತ್ತಲೇ ಇವರ ಆಪ್ತರು, ಹಿತೈಷಿಗಳು, ಕನ್ನಡ ವಿವಿ ಸಹೋದ್ಯೋಗಿಗಳು, ಮಿತ್ರರು, ವಿದ್ಯಾರ್ಥಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದಿದೆ. ಗುಲ್ಬರ್ಗಾ ವಿವಿಯ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್, ದೇವರಾಜು ಅರಸು ವೇದಿಕೆಯ ಮುಖಂಡ ಕಲ್ಲುಕಂಬ ಪಂಪಾಪತಿ, ಹಿರಿಯ ಸಾಹಿತಿ, ಚಿಂತಕ ಡಾ. ವೆಂಕಟಯ್ಯ ಅಪ್ಪಗೆರೆ, ಕರ್ನಾಟಕ ಜಾನಪದ ಪರಿಷತ್ತು, ಬಳ್ಳಾರಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಡಾ. ಅಶ್ವರಾಮು,ಕರ್ನಾಟಕ ಜಾನಪದ ವಿವಿಯ ಡಾ ಮಲ್ಲಿಕಾರ್ಜುನ ಬಿ ಮಾನ್ಪಡೆ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಅಶ್ವ ರಾಮಣ್ಣ , ಸಿಂಧನೂರು ಮನುಕುಲ ಆಶ್ರಮ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಮಲ್ಲಿಕಾರ್ಜುನ ಬೆಳಗಲ್ಲು, ಬೀದರಿನ ಗೌತಮ ಬುದ್ಧ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಲಕ್ಕಿ ಪೃಥ್ವಿರಾಜ್ ಸೇರಿದಂತೆ ಹಲವು ಗಣ್ಯರು, ವಿವಿಧಸಂಘ ಸಂಸ್ಥೆಗಳ ಮುಖಂಡರು ಬುಡಕಟ್ಟು ತಜ್ಞರಾದ ಡಾ. ಮೇತ್ರಿ ಅವರ ನೇಮಕವನ್ನು ಸ್ವಾಗತಿಸಿ ಅಭಿನಂದಿಸಿದ್ದಾರೆ.
—–