ಬಳ್ಳಾರಿ,ಮಾ .6: ನಾಗರಿಕರ ಹಕ್ಕುಗಳು , ಕರ್ತವ್ಯಗಳು ಸರ್ಕಾರದ ರಚನೆ ಮತ್ತು ಜನಪ್ರತಿನಿಧಿಗಳ ಕಾರ್ಯಕ್ಷಮತೆ ಅರ್ಥ ಮಾಡಿಕೊಳ್ಳಲು ಸಂವಿಧಾನದ ಜ್ಞಾನ ಮುಖ್ಯ ಎಂದು ಸರಳಾದೇವಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹೊನ್ನೂರಾಲಿ ಐ ಅವರು ಅಭಿಪ್ರಾಯಪಟ್ಟರು. ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಗರದ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ‘ ಸಂವಿಧಾನ ಜಾಗೃತಿ ಜಾಥಾ ‘ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂವಿಧಾನ ಜಾರಿಗೆ ಬಂದು ಏಳು ದಶಕಗಳು ಕಳೆದರೂ ಭಾರತೀಯರಿಗೆ ಸಂವಿಧಾನ ಪ್ರಜ್ಞೆಯ ಭಾಗವಾಗಿಲ್ಲದಿರುವುದು ಅತ್ಯಂತ ಕಳವಳಕಾರಿ ಸಂಗತಿ. ಸಂವಿಧಾನದ ಆಶಯಗಳು , ಧ್ಯೇಯೋದ್ದೇಶಗಳು ಪ್ರತಿಯೊಬ್ಬ ನಾಗರಿಕನ ಪ್ರಜ್ಞೆಯ ಭಾಗವಾಗದಿದ್ದಲ್ಲಿ ನಮ್ಮ ಹಿತಾಸಕ್ತಿಗೆ ವಿರುದ್ಧವಾದ ಸರ್ಕಾರಗಳು ನಮ್ಮನ್ನು ಆಳುತ್ತವೆ ಎಂದು ಮಾರ್ಮಿಕವಾಗಿ ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಿಲಯ ಪಾಲಕ ಅರುಣಕುಮಾರ, ವಿದ್ಯಾರ್ಥಿಗಳಿಗೆ ಸಂವಿಧಾನದ ಸ್ವರೂಪ ಮತ್ತು ಆಶಯಗಳನ್ನು ಮನದಟ್ಟು ಮಾಡಿ ಕೊಡುವ ಒತ್ತಾಸೆ ಈ ಕಾರ್ಯಕ್ರಮದ ಹಿಂದೆ ಇದೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗೀರಸಾಬ್ ದಿನ್ನಿ ಅವರು ಮಾತನಾಡಿ, ಸಂವಿಧಾನ ನಮಗೆ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಮತದಾನ ಮುಂತಾದ ಹಕ್ಕುಗಳನ್ನು ನೀಡಿದೆ. ಜಾತ್ಯಾತೀತ ಮನೋಭಾವವನ್ನು ನಾವೆಲ್ಲರೂ ಮೈಗೂಡಿಸಿಕೊಂಡು ಸಾಗಬೇಕೆಂದು ತಿಳಿಸಿದರು. .
ಕರ್ನಾಟಕ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ದುರುಗಪ್ಪ ಅತ್ಯಂತ ಮಹತ್ವದ ನಿಲುವುಗಳನ್ನು ಹೊಂದಿರುವ ಸಂವಿಧಾನವನ್ನು ಗೌರವಿಸುವ , ಅರಿತುಕೊಳ್ಳುವ ಕೆಲಸ ಇಂದು ಜರೂರಾಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆಚ್.ಕೆ. ಮಂಜುನಾಥ ರೆಡ್ಡಿಅವರು, ಸಂವಿಧಾನದ ಪೀಠಿಕೆಯು ಅದರ ಕನ್ನಡಿಯಂತಿದೆ . ಸಂವಿಧಾನವನ್ನು ಸರಿಯಾದ ನೆಲೆಯಲ್ಲಿ ಗ್ರಹಿಸಿಕೊಂಡು ಬದುಕಿದಾಗ ಪ್ರಬುದ್ಧ ಭಾರತವನ್ನು ಕಾಣಲು ಸಾಧ್ಯ ಎಂದರು .
ಈ ಸಂದರ್ಭದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಶಶಿಕಾಂತ ಬಿಲ್ಲವ, ಕೆ ಬಸಪ್ಪ, ಪ್ರವೀಣಕುಮಾರ್, ಲಿಂಗಪ್ಪ, ರಾಮಸ್ವಾಮಿ, ಡಾ.ಹೇಮೇಗೌಡ, ಡಾ.ಸುಜಾತ, ರಫಿ, ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.
—–