ಡಾ. ಕೆ ಎಂ ಮೇತ್ರಿ ಎಂಬ  ಅಲೆಮಾರಿ,ಅರೆ ಅಲೆಮಾರಿ ಸಮುದಾಯಗಳ  ಆಶಾಕಿರಣ. -ಡಾ.ನಿಂಗಪ್ಪ ಮುದೇನೂರು, ಸಹಾಯಕ ಪ್ರಾಧ್ಯಾಪಕರು, ಕರ್ನಾಟಕ ವಿವಿ, ಧಾರವಾಡ

‘ಮೇತ್ರಿ’ಎಂದರೆ ನಮಗಷ್ಟೇ ಅಲ್ಲ.,ಕರ್ನಾಟಕದ ಅಲೆಮಾರಿ,ಅರೆ ಅಲೆಮಾರಿ ಸಮುದಾಯಗಳಿಗೆ ಒಂದು ಆಶಾಕಿರಣ.ಬೇಂದ್ರೆ,ಕಾವ್ಯವನ್ನು ಭರವಸೆಯ ವ್ಯವಸಾಯ ಎಂದಂತೆ ಸಮುದಾಯಗಳು ಮೇತ್ರಿಯವರನ್ನು ತಮ್ಮ ಭರವಸೆಯ ಅಲೆಮಾರಿ ದುಡಿಮೆಯ ಅಂತಃಶಕ್ತಿ ಎಂದೇ ಭಾವಿಸಿದ್ದು.ಉತ್ತರ ಕರ್ನಾಟಕ ಎಷ್ಟೋ ಬುಡಕಟ್ಟುಗಳು ಇಂದು ಒಂದು ಸೂರನ್ನು, ತುಂಡು ಭೂಮಿಯನ್ನು ಅಥವಾ ತಮ್ಮ ಕುಲಕ್ಕೆ ಇಲ್ಲದ ಆದ್ಯತೆಯ ಜಾತಿ ಆಧಾರಿತ ಪ್ರಮಾಣ ಪತ್ರಗಳನ್ನು ಪಡೆದು ಒಂದಿಷ್ಟು ಸಾಮಾಜಿಕ,ಆರ್ಥಿಕ ಐಡೆಂಟಿಟಿಗಳನ್ನು ಹೊಂದಲು ಮೇತ್ರಿಯವರ ಶ್ರಮದ ಪಾಲು ದೊಡ್ಡದು.ಅಲೆಮಾರಿ,ಅರೆಅಲೆಮಾರಿ ಸಮುದಾಯಗಳಲ್ಲೂ ನಾಯಕರಿದ್ದರೂ ಅವರು ಅವರವರ ಸಮುದಾಯಗಳಿಗೆ ಸಾಂಸ್ಕೃತಿಕ ವೀರರು ಇದ್ದಹಾಗೆ. ಆದರೆ ಅವರಿಗೆ ಸ್ವತಃ ನೆಲೆ ಇಲ್ಲದೆ ಬದುಕುವ ಸ್ಥಿತಿಯನ್ನು ಕಣ್ಣಾರೆ ಕಂಡ ಮೇತ್ರಿಯವರು ಸಮುದಾಯಗಳ ಬದುಕನ್ನು ಬೆನ್ನು ಹತ್ತಿ ಹೋದವರು.ಹಗಲು ರಾತ್ರಿ ಎನ್ನದೆ ಅವರು ಸುಮಾರು ಮೂರು ದಶಕಗಳ ಕಾಲ ಪಟ್ಟ ಶ್ರಮ ನಮಗೆ ಗೊತ್ತು.

ಅಲೆಮಾರಿ ಸಮುದಾಯಗಳ ಜೀವನ, ಸಾಮುದಾಯಿಕ ಪ್ರಗತಿಗೆ,ಅವರ ಶೈಕ್ಷಣಿಕ,ಸಾಮಾಜಿಕ, ಆರ್ಥಿಕ,ಧಾರ್ಮಿಕ, ರಾಜಕೀಯ,ಸಾಂಸ್ಕೃತಿಕ ಅಧ್ಯಯನಕ್ಕೆ ತಮ್ಮ ವೃತ್ತಿಜೀವನವನ್ನು ಮೀಸಲಿಟ್ಟ ಅವರು ಅಪ್ಪಟ ಕ್ಷೇತ್ರ ಕಾರ್ಯವನ್ನು ಒಳಗೊಂಡ ಸಮುದಾಯಗಳ ದಾಖಲಾತೀಕರಣವನ್ನು ಮೇತ್ರಿಯವರು ಮಾಡಿದರು. ಇಂದು ಯಾರೇ ಅಲೆಮಾರಿ,ಅಲೆಮಾರಿ ಸಮುದಾಯಗಳ ಬಗೆಗೆ ಅಧ್ಯಯನ ಮಾಡಿದರೂ ಕರ್ನಾಟಕದ ಸಂದರ್ಭದಲ್ಲಿ ಮೇತ್ರಿಯವರ ಅಧಿಕೃತ ಅಂಕಿ ಅಂಶಗಳ ಆಧಾರಿತ ಅಧ್ಯಯನದ ಫಲಿತಗಳನ್ನಿಟ್ಟುಕೊಂಡೇ ಮುಂದೆ ಸಾಗಬೇಕು.ಕರ್ನಾಟಕದ ಜಾತಿ ಬುಡಕಟ್ಟುಗಳ ಬಗೆಗೆ ಮೇತ್ರಿಯವರಲ್ಲಿ ಅಧಿಕೃತ ಮಾಹಿತಿ ಉಂಟು. ಭಾರತೀಯ ಬುಡಕಟ್ಟು ಸಮುದಾಯಗಳ ಬಗೆಗೂ ಅವರಿಗೆ ವಿಶೇಷ ನಂಟಿದೆ.ಬುಡಕಟ್ಟುಗಳನ್ನು ಅಧ್ಯಯನಿಸುವ ಐಷಾರಾಮಿ ವಿದ್ವಾಂಸರ ನಡುವೆ ಮೈತ್ರಿ ತಣ್ಣಗೆ ಹರಿಯುವ ಜೀವ ಜಲದಂತೆ ಸಮುದಾಯಗಳಿಗೆ ಆಶ್ರಯವಾಗಿ ನಿಂತವರು. ಸದಾ ಮೌನಿಯಾಗಿ ಹಿಡಿದ ಹಾದಿಯನ್ನು ಬಿಡದೆ ಕುಟುಂಬದಲ್ಲೂ ವಿಶ್ವಾಸವನ್ನು ಇಟ್ಟುಕೊಂಡು ಸಾಗಿ ಕಾಲ್ನಡಿಗೆಯಲ್ಲಿ ಸಮುದಾಯಗಳ ಬದುಕನ್ನು ಸುತ್ತಾಡಿ ಜೀವ ಪರ ಖುಷಿ ಕಂಡವರು.

ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ವಿಭಾಗದ ಪ್ರಾಧ್ಯಾಪಕರಾಗಿ,ವಿದ್ವಾಂಸರಾಗಿ ಲಕ್ಷ ಲಕ್ಷ ಸಂಬಳವ ತೆಗೆದುಕೊಂಡರೂ ಅವರ ಪೂರ್ಣ ಲಕ್ಷವಿದ್ದದ್ದು ಸಮುದಾಯಗಳ ಬದುಕಿನ ಮೇಲೆ. ನಾನು ಕನ್ನಡ ವಿಶ್ವವಿದ್ಯಾಲಯದಲ್ಲಿ 1998-99 ರಿಂದ 2002 ರವರೆಗೆ ಪಿಎಚ್.ಡಿ ಮಾಡುವಾಗ ಬುರ್ರಕಥಾ ಈರಮ್ಮನ ಕುರಿತಾದ ಅಲೆಮಾರಿ ಆತ್ಮಕಥನವನ್ನು ಬರೆಯಲು,ಆಕೆಯ ಜೀವನವನ್ನು ನಿರೂಪಿಸಲು ಪ್ರೇರೇಪಿಸಿದ ಅವರ ಕೌಟುಂಬಿಕ ಪ್ರೀತಿ ದೊಡ್ಡದು.ತಾವೂ ಸಮುದಾಯಗಳ ಜೊತೆ ಬೆರೆತು ಅವರ ಕಷ್ಟ ಸುಖಗಳನ್ನ ಆಲಿಸುವಂತೆ ಮಾಡಿದವರು.ಆಗ ನಮ್ಮಂತಹ ಗ್ರಾಮೀಣ ಪ್ರತಿಭೆಗಳಿಗೆ ಆತ್ಮವಿಶ್ವಾಸದ ಕೊಂಡಿಯಾದವರು ಇದೇ ಮೇತ್ರಿಯವರು. ಬೀದರ್ ಪ್ರದೇಶದಿಂದ ಬಂದು ಬಳ್ಳಾರಿ ಬಿರು ಬಿಸಿಲ ನಾಡಿನ ನಡುವೆಯೂ ಮುಕ್ಕಾಗದ ವ್ಯಕ್ತಿತ್ವವನ್ನು ಹೊಂದಿದವರು ಮೇತ್ರಿಯವರು.

ಈಗ ತಾವು ನಿಂತ ಅದೇ ಬಳ್ಳಾರಿ ಶ್ರೀಕೃಷ್ಣ ದೇವರಾಯ ವಿದ್ಯಾಲಯಕ್ಕೆ ಇಂದು ‘ಕುಲಪತಿ’ ಆಗುವ ಹಂತಕ್ಕೆ ಬೆಳೆದು ನಿಂತದ್ದು ಅವರ ನಿಜವಾದ ಶ್ರಮದ ಪ್ರತಿಫಲವೇ.ಗೊಂಡ ಸಮುದಾಯದಿಂದ ಬೆಳೆದು ಬಂದ ಮೇತ್ರಿಯವರು ಉಣ್ಣೀ ಕಂಕಣದ ಅನನ್ಯ ಪ್ರತಿಭೆ.ತನ್ನ ಸಮುದಾಯದ ಅಧ್ಯಯನ ಸೇರಿ ಕರ್ನಾಟಕದ ಹಲವು ಸಮುದಾಯಗಳ ಬಗೆಗೆ ಅವರು ಮಾಡಿದ ಕ್ಷೇತ್ರಕಾರ್ಯಾಧಾರಿತ ಅಧ್ಯಯನದ ಪೂರ್ಣ ಕೆಲಸವೇ ತುಂಬಾ ಅಗಾಧ ಮತ್ತು ಮಹತ್ವದ್ದು. ಅತಿಯಾದ ಅಕಾಡೆಮಿಕ್ ಚೌಕಟ್ಟನ್ನು ಬದಿಗಿರಿಸಿ ಅಪ್ಪಟ ಸಮುದಾಯಗಳ ಜೀವನ ಪ್ರೀತಿಯ ಬರಹಗಳತ್ತ ತಮ್ಮ ಚಿಂತನೆಯ ಬೆವರ ಹರಿಸಿದವರು. ಕುಮಾರರಾಮ ಮತ್ತು ಕೃಷ್ಣಗೊಲ್ಲರ ಮಹಾಕಾವ್ಯ, ಕೃಷ್ಣಗೊಲ್ಲರ ಕಥನ ಕಾವ್ಯಗಳು, ಎಲ್ಲಮ್ಮನ ಕಾವ್ಯ, ಬುಡ್ಗ ಜಂಗಮರು, ರಾಜಗೊಂಡ, ಬುಡಕಟ್ಟು ಕುಲಕಸುಬುಗಳು ಇಂತಹ ಮಹತ್ವದ ಕೃತಿಗಳು ಸೇರಿ ಸುಮಾರು 25 ಗ್ರಂಥಗಳನ್ನು ಹೊರ ತಂದವರು. ಹಿಂದಿ, ಇಂಗ್ಲಿಷ್,ಮತ್ತು ಕನ್ನಡದಲ್ಲಿ ಪ್ರಭುತ್ವ ಹೊಂದಿರುವ ಮೇತ್ರಿಯವರು ರಾಷ್ಟ್ರೀಯ ಆದಿವಾಸಿ ಸಮುದಾಯಗಳ ಭಾಗವಾಗಿ ಸಂಘಟಿತರಾಗಿ ದುಡಿದವರು.

ಸಮಾಜಶಾಸ್ತ್ರ, ಮಾನವ ಶಾಸ್ತ್ರ,ಶಿಕ್ಷಣ ಶಾಸ್ತ್ರವನ್ನು ತಮ್ಮ ಬುಡಕಟ್ಟು ಕುಲ ಲೋಕ ಜ್ಞಾನಕ್ಕೆ ಅಳವಡಿಸಿಕೊಂಡು ಅಧ್ಯಯನ ಮಾಡಿದವರು.ಮಾನವಿಕ ವಿದ್ವಾಂಸರಾಗಿ ನಮ್ಮ ನಡುವೆ ಅವರಿರುವುದರಿಂದಲೇ ಬಳ್ಳಾರಿಯ
ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಶೈಕ್ಷಣಿಕ ವಲಯಕ್ಕೂ ಖಂಡಿತ ಸಮುದಾಯಕೇಂದ್ರಿತ ಮಾನವೀಯಸ್ಪರ್ಶ ನೀಡಬಲ್ಲರೆಂಬ ವಿಶ್ವಾಸ ನನಗಿದೆ. ನೂತನ ಕುಲಪತಿಗಳಾಗಿ ತಮ್ಮ ನಾಲ್ಕು ವರ್ಷಗಳ ಸೇವಾವಧಿಯಲ್ಲಿ ಅವರು ಎಂದಿನಂತೆ ಉತ್ತಮ ಕೆಲಸಗಳನ್ನು ಮಾಡಲಿ.ಅವರ ಸಾರಥ್ಯದಲ್ಲಿ ನಮ್ಮದೇ ಆದ,ನಮ್ಮ ನೆಲದ ಬಳ್ಳಾರಿ ವಿ.ವಿ ಒಳ್ಳೆಯ ಮುನ್ನಡೆಯನ್ನು ಸಾಧಿಸಲಿ ಎಂದು ಆಶಿಸುವೆ.                    ಸಮುದಾಯಗಳ ತಾಯಿ ಪ್ರೀತಿಯ ಪ್ರೊ.ಕೆ.ಎಂ.ಮೇತ್ರಿ ಸರ್ ಅವರಿಗೆ ಈ ಮೂಲಕ ನಿಮ್ಮಂತೆಯೇ ಅಭಿನಂದನೆಯ ಶುಭವ ಕೋರುವೆ.


-ಡಾ.ನಿಂಗಪ್ಪ ಮುದೇನೂರು, ಕರ್ನಾಟಕ ವಿವಿ, ಧಾರವಾಡ