ನನ್ನೊಳಗಿನ ಪ್ರತಿಧ್ವನಿ
ವಿಶ್ವವಿಖ್ಯಾತ
ಗೋಡೆ- ಗುಂಬಜಗಳ ಕಂಡ ನಾನು
ಎಂದೂ ಆಶ್ಚರ್ಯಗೊಂಡಿಲ್ಲ
ಬೆರಗುಗೊಂಡಿಲ್ಲ
ಕ್ಷಣ ಹೊತ್ತು ಉಸಿರು ಹಿಡಿದು
ಮೂಗಿನ ತುದಿಯಲಿ ಬೆರಳು
ಕುಣಿಸಿದುದಿಲ್ಲ
ಅವುಗಳೆತ್ತರದ ನೆರಳು ನೆಲಕ್ಕೆ
ಹೊರಳಿದಾಗ
ಚಾಟಿ ಏಟು ತಿನ್ನುತ್ತ
ಕಲ್ಲು ಮರಳು ಹೊತ್ತು
ಮೇಲೆ ಸಾಗಿಸುತ್ತ
ಜೀತಾಳುಗಳೆಂದೋ, ಗುಲಾಮರೆಂದೋ
ಕರೆಸಿಕೊಂಡು
ನೋವಲ್ಲಿ ನರಳಲ್ಲಿ
ಉರುಳಿ ಉಸಿರು ಕಳಕೊಂಡವರು
ಅಲ್ಲಿ ಕರಿ ನೆರಳಲ್ಲಿ ಪಿಸುಗುಡುತ್ತಾರೆ
ನನ್ನ ಧಮನಿಗಳಲ್ಲಿ
ಸೂಜಿಯಾಗುತ್ತಾರೆ.
ಹೂತುಕೊಂಡಿದ್ದಾರೆ ಅಲ್ಲೆ
ಸುತ್ತುವರಿದ ಮೆಟ್ಟಿಲುಗಳಲ್ಲಿ
ಹೆಸರುಳಿಯದ ಗೋರಿಗಳಲ್ಲಿ
ಉದ್ಯಾನದಲಿ ಅರಳಿದ
ಕೆಂಗುಲಾಬಿಗಳಿಗೆ ರಕ್ತ ರಸವಾಗಿ
ಅಟ್ಟಹಾಸದ ಗೋಲಗುಮ್ಮಟಕ್ಕೆ
ಅನಂತ ಗೋರಿಗಳಿಗೆ
ಒಪ್ಪವಾಗಿದ್ದಾರೆ.
ನನ್ನವರು, ಚಾಟಿಗೆ ಸತ್ತವರು
ಈಟಿಗೆ ಸತ್ತವರು
ಹಸಿವಿಗೆ ಸತ್ತವರು
ಕೊನೆಗೆ ಪ್ರೀತಿಗೂ ಸತ್ತವರು
ಅದಕ್ಕಾಗಿ
ನನ್ನೆದೆಯ ಗುಮ್ಮಟದಲ್ಲಿ
ರಂಭಾ ರಂಭಾ ಎಂಬ
ಪ್ರತಿಧ್ವನಿ
-ಡಾ.ಜೆ.ಪಿ ದೊಡ್ಡಮನಿ, ಅಥಣಿ
———