ಅನುದಿನ ಕವನ-೧೧೬೩, ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ಮುಚ್ಚಿದ ಬಾಗಿಲು

🍀🌺🍀💐ಎಲ್ಲರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು🍀💐🍀🌺
(ಸಂಪಾದಕರು)
*****
ಮುಚ್ಚಿದ ಬಾಗಿಲು

ಅಂದದ ಕುಸುರಿನ ಚೆಂದದ ಮೆರುಗಿನ
ಸಂದು ಬಿಡದೆ ಮುಚ್ಚಿದ ಬಾಗಿಲು ಅವಳು
ಏನುಂಟು ಏನಿಲ್ಲ ಮುಚ್ಚಿದ ಬಾಗಿಲ ಹಿಂದೆ
ಅದು ಬಲು ಅನೂಹ್ಯ ಎಟುಕದು ಕೈಗೆ

ಮುಚ್ಚಿದ ಬಾಗಿಲ ಹಿಂದೆ ಇರಬಹುದು….
ಅಸಂಖ್ಯ ಪ್ರಪಾತ ಕಣಿವೆ ಕೊರಕಲುಗಳು
ಅದರೊಡಲಲಿ ಬಾನೆತ್ತರಕ್ಕೆದ್ದು ನಿಂತ ಗಿರಿಗಳು
ಆ ಗಿರಿಗಳ ನೆರಳಲಿ ಹಾಸಿದ ಹಸಿರು ಬಯಲು
ಅವುಗಳ ನಡುವೆ ಕೆಂಬಣ್ಣ ಚಿಮ್ಮುವ ಗೀರುಗಳು
ಯಾವುದೂ ಕಾಣದಂತೆ ಭದ್ರ ಕುಸುರಿ ಬಾಗಿಲು

ಮುಚ್ಚಿದ ಬಾಗಿಲ ಹಿಂದೆ ಇರಬಹುದು…..
ನೂರು ಕತೆಗಳ ಬರಹ ಸಾವಿರ ಕವಿತೆಗಳ ಸಾಲು
ಹಲವು ಬಣ್ಣ ಹಚ್ಚಿದ ಒಣಮಾತುಗಳ ಕಂತೆ
ಇನ್ನೂ ಕೆಲವು ಸ್ವರ ಕಳೆದು ಹೋದ ಹಾಡುಗಳು
ಮತ್ತೆ ಸ್ವಲ್ಪ ಅಗಣಿತ ಶಬ್ದ ಅಡಗಿದ ನಿಶ್ಯಬ್ದ
ಯಾವುದೂ ಕೇಳದಂತೆ ಭದ್ರ ಕುಸುರಿ ಬಾಗಿಲು

ಮುಚ್ಚಿದ ಬಾಗಿಲ ಹಿಂದೆ ಇರಬಹುದು…..
ರೇಶಿಮೆ ತೆರೆಯ ಮುಸುಕಿನಲಿ ಆಳೆತ್ತರದ ಕನ್ನಡಿ
ಇದಿರಿಗೆ ಒಮ್ಮೊಮ್ಮೆ ಅವಳು ಬೆನ್ನೇರಿದ ಭೂತದೊಡನೆ
ತನ್ನಾಳ ಬಗೆಯುತ ವಿಪರ್ಯಾಸದ ವರ್ತಮಾನದೊಡನೆ
ಬೆದರಿ ಗೊಂದಲದಲಿ ಭವಿಷ್ಯದ ನೆರಳು ಕೆದಕುತ
ಯಾವುದೂ ತಿಳಿಯದಂತೆ ಭದ್ರ ಕುಸುರಿ ಬಾಗಿಲು

ಆ ಮುಚ್ಚಿದ ಬಾಗಿಲ ಹಿಂದೆ ಇರಬಹುದು…….
ಅದರ ನುಣ್ಣನೇ ಮಿರುಗುವ ರಂಗಿನ ನಕ್ಷೆಗಳ
ನಕ್ಷತ್ರಗಳ ಹೊದ್ದ ಚಂದಿರನ ತಂಬೆಳಕಿನಂಗಳ
ಅದರ ಮಿಸುನಿ ಬೆಳಕಲ್ಲಿ ಅಗಣಿತ ಒಗಟುಗಳ
ಲೆಕ್ಕವಿಲ್ಲದ ಲೆಕ್ಕಾಚಾರಗಳ ಉತ್ತರ ಸಿಗದ ಪ್ರಶ್ನೆಗಳ
ಒಪ್ಪವಾಗಿ ಪೇರಿಸಿಟ್ಟ ಹೊಂದಿಸಿಟ್ಟ ಮೂಟೆಗಳ ಸಾಲು
ಯಾವುದೂ ಅಳವಿಗೆ ನಿಲುಕದಂತೆ ಬಲು ಭದ್ರ ಆ ಕುಸುರಿ ಬಾಗಿಲು !!

-ಸರೋಜಿನಿ ಪಡಸಲಗಿ
ಬೆಂಗಳೂರು
——

One thought on “ಅನುದಿನ ಕವನ-೧೧೬೩, ಕವಯಿತ್ರಿ: ಸರೋಜಿನಿ ಪಡಸಲಗಿ ಬೆಂಗಳೂರು, ಕವನದ ಶೀರ್ಷಿಕೆ: ಮುಚ್ಚಿದ ಬಾಗಿಲು

  1. ಭದ್ರವಾಗಿ ಮುಚ್ಚಿದ ಬಾಗಿಲದ ಹಿಂದೆ ಅದೆಷ್ಟು ರಹಸ್ಯಗಳು! ಅದನ್ನು ವರ್ಣಿಸಿದ ಶೈಲಿ ಮತ್ತು ಭಾಷೆ ಸಹ ಚಂದ! ಶ್ರೀವತ್ಸ

Comments are closed.