ಕಾವ್ಯ ಕಹಳೆ, ಕವಿ: ವಿಠೋಬಾ ಹೊನಕಾಂಡೆ, ಬಳ್ಳಾರಿ, ಕವನದ ಶೀರ್ಷಿಕೆ: ಮಹಿಳಾ ದಿನ, ಚಿತ್ರಕೃಪೆ: ಶಿವಶಂಕರ ಬಣಗಾರ, ಹೊಸಪೇಟೆ

ಮಹಿಳಾ ದಿನ

ವರುಷಾನುವರುಷಗಳ ಕಾಲ ಶಿಕ್ಷಣ ನೀಡದೆ
ಮಕ್ಕಳ ಹೆರುವ ಯಂತ್ರವೆಂದು ಬಗೆದು
ಮಡಿ ಮೈಲಿಗೆಯ ಹೆಸರಿನಲಿ ಹೀಗಳೆದು
ನಮ್ಮನು ದೂರ ನೂಕಿ
ಈ ದಿನ ಬರಿ ವಿಶ್ ಮಾಡಿದರೆ ಸಾಕೇ…

ಅರ್ಧ ಜನಸಂಖ್ಯೆಇದ್ದರೂ
ಗಿರ್ದ ಅವಕಾಶವನೂ ಶಾಸನ ಸಭೆಗಳಲಿ ನೀಡದೆ
ರಾಜಕೀಯ ಅವಕಾಶ ಕೇಳಿದ ಮಹಿಳೆಯರ
ಮತ್ತವರ ಹೋರಾಟದ ಬದುಕನು
ತರಹೇವಾರಿ ಕತೆ ಕಟ್ಟಿ ಮಾತನಾಡಿ
ಇವತ್ತೊಂದಿನ ವಿಶ್ ಮಾಡಿದರೆ ಸಾಕೇ…

ನಮ್ಮಾಯ್ಕೆಯ ಸ್ವಾತಂತ್ರ್ಯ ಕಸಿದು
ನಿಮ್ಮಿಷ್ಟವ ನಮ್ಮ ಮೇಲೆ ಹೇರುವ
ತನ್ನಿಸ್ಟದಂತೆ ನಡೆದ ಸ್ವಂತ ಮಗಳ ಕೊಂದು
ಮರ್ಯಾದೆ ಹತ್ಯೆ ಎಂದು ಕೊಚ್ಚಿಕೊಂಡು
ಅರಚಿಕೊಂದು ಬೀಗುತ
ಇವತ್ತೊಂದಿನ ವಿಶ್ ಮಾಡಿದರೆ ಸಾಕೇ…

ನಮ್ ಬಟ್ಟೆ ಊಟ ಮಾತು ಜೀವನ
ಎಲ್ಲವೂ ಹೀಗೆ ಇರಬೇಕು ಎಂದು ನಿರ್ದೇಶಿಸುತ
ಸಂಸ್ಕೃತಿಯ ಹೆಸರಲಿ ದೌರ್ಜನ್ಯ ಮಾಡಿ
ಸಮಾನತೆ ಸಮಾನತೆ ಎಂದು ಪೊಳ್ಳು ಭಾಷಣ ಮಾಡಿದರೆ ಸಾಕೇ…

ನಾವು ಮಹಿಳೆಯರು
ಜೀವಕೆ ಜನ್ಮವಿತ್ತು ಬೆಳೆಸಿ
ಜೀವಸಂಕುಲ ಸಲಹಿದವರು
ನೋವ ಸಹಿಸಿ ಮನೆಯ ಬೆಳಗಿದವರು
ಎಲ್ಲ ಕ್ಷೇತ್ರದಲೂ ನಾವು ಸಮಪಾಲು ಪಡೆಯಬಾರದೇ
ಬರೀ ವಿಶ್ ಮಾಡಿದರೆ ಸಾಕೇ…??

-ವಿಠೋಬಾ ಹೊನಕಾಂಡೆ, ಬಳ್ಳಾರಿ