ಅನುದಿನ ಕವನ-೧೧೬೪, ಕವಿ: ಕೆ.ಬಿ. ವೀರಲಿಂಗನಗೌಡ್ರ, ಬಾದಾಮಿ, ಕವನದ ಶೀರ್ಷಿಕೆ:ನಾನೂ ಗುಂಡ್ಹಾಕ್ತಿನ್ರಿ!

ನಾನೂ ಗುಂಡ್ಹಾಕ್ತಿನ್ರಿ!

ಗೌಡ್ರೇ..
‘ಗುಂಡು’ ನಾನೂ ಹಾಕ್ತಿನ್ರಿ
ನೆತ್ತರು ಒಸರದ
ಪ್ರೀತಿ ಒತ್ತರಿಸಿ ಮತ್ತೇರಿಸುವ
ಮದ್ದಿನಂತಹ ಗುಂಡ

ಒಳಗಿಳಿದ ಮೆಲೆ
ಮೇರೆ ಮೀರಿ ಹಗುರಾಗಿಸಿ
ಹದಗೊಳಿಸಿ ಹುರಿಗೊಳಿಸುವ ಗುಂಡ

ಗೌಡ್ರೇ..
ನಾನ್ಹಾಕಿದ ಗುಂಡಿಗೆ
ಜಾತಿಯ ಜಂತು ನಿಕಾಲ್ಯಾಗಿ
ಜಾತ್ಯಾತೀತತೆ ಚಿಗುರಿ ಹೆಮ್ಮರಾಗೈತ್ರಿ

ಗೌಡ್ರೇ..
ನೀವು ಗುಂಡು ಹಾಕ್ಸುದಾದ್ರ
ಸಾಲಾಗಿ ನಿಲ್ಲಿಸಬ್ಯಾಡ್ರ್ಯಾಪಾ
ಕುಂತು ಸಮಾ ಗುಂಡ್ಹಾಕ್ತಿನಿ ಆಮ್ಯಾಗ ಗುಂಡಿನ ಮಳಿಗರಸ್ರಿ

ಗೌಡ್ರೇ..
ಸಾವನೆದಿರಿಸುವ ಗುಂಡಿಗೂ
ತಲೆಮರಿಸಿಕೊಂಡು ಓಡಾಡುವ
ರಣಹೇಡಿ ಗುಂಡಿಗೂ ಭಾಳಾ ಫರಕೈತ್ರಿ

ಗೌಡ್ರೇ..
ಹೋಗ್ಲಿಬಿಡ್ರಿ
ಒಂದ್ಸಾರಿ ಒಂದೇ ಒಂದ್ಸಾರಿ
ನಮ್ಮ ಗುಂಡ ಹೊಡ್ದ ನೋಡ್ರಿ
ಮನಗಂಡೈತಿ ಅವನೌನ್
ಹೊಟ್ಯಾನ ಹೊಲ್ಸೆಲ್ಲಾ ಎಕ್ಕುಟ್ಟಿಹೊಕೈತ್ರಿ.

-ಕೆ.ಬಿ. ವೀರಲಿಂಗನಗೌಡ್ರ, ಬಾದಾಮಿ