ಅನುದಿನ ಕವನ-೧೧೬೫, ಕವಯಿತ್ರಿ: ಡಾ. ವಾಣಿಶ್ರೀ ಕಾಸರಗೋಡು ಗಡಿನಾಡ ಕನ್ನಡತಿ, ಕವನದ ಶೀರ್ಷಿಕೆ:ಸಾರ್ಥಕದ ಬದುಕು

ಸಾರ್ಥಕದ ಬದುಕು

ದೃಢ ನಿಶ್ಚಯದಿ ಮುನ್ನಡೆ ಮನುಜ ಜಯವು ಸಿಗುವುದು
ಮನದಿ ಸಂಕಲ್ಪ ಮಾಡು ಗೆಲುವು ಗುರಿ ತಲುಪಿಸುವುದು
ಕಾಲೆಳೆಯುವವರು ಇಹರು ಸಹಜ ಅಸಡ್ಡೆ ತೋರುವುದು
ಅಡೆತಡೆಗಳ ಅಧಿಗಮಿಸುವ ಛಲವು ಗಮ್ಯ ಸೇರಿಸುವುದು

ಮಾಡುವ ಕಾಯಕವ ತಿಳಿದು ಜನರು ಮೆಚ್ಚುವಂತೆ ಮಾಡು
ಮನಸಿನ ಮಾತನು ಆಲಿಸಿ ಬೆದರದೆ ಮುಂದಡಿಯ ಇಡು
ನ್ಯಾಯ ನೀತಿಯಿಂದ ನಡೆ ಅನ್ಯಾಯದ ಹಾದಿಯನು ಬಿಡು
ಒಳ್ಳೆಯ ಕೆಲಸ ಎಂದಿಗೂ ಒಳಿತು ಮಾಡುವುದು ನೋಡು

ಬಾಳಿದ ಬಾಳಿನಲಿ ಕುರುಹು ಉಳಿಯುವಂತೆ ಬದುಕಬೇಕು
ಜನರ ಒಡನಾಟದಲಿ ಬೆರೆತು ನೆನೆಸಿಕೊಳ್ಳುವoತೆ ಇರಬೇಕು
ಕಾಯ ತೊರೆದರೂ ಕೂಡಾ ಕಾಯಕ ಜೀವಂತವಾಗಿರಬೇಕು
ಇರುವುದೊಂದೇ ಈ ಜೀವನ ನೆಲೆ ಸಾರ್ಥಕವಾಗಿರಬೇಕು

-ಡಾ. ವಾಣಿಶ್ರೀ ಕಾಸರಗೋಡು,                           ಗಡಿನಾಡ ಕನ್ನಡತಿ

—–