ಅನುದಿನ‌ ಕವನ-೧೧೬೬, ಕವಿ: ಡಾ.ವೆಂಕಟೇಶ ನೆಲ್ಲುಕುಂಟೆ, ಬೆಂಗಳೂರು, ಕವನದ ಶೀರ್ಷಿಕೆ: ದಾರ

ದಾರ

ಒಂದಾನೊಂದು ಕಾಲದಲ್ಲಿ
ಎರೆ ಮಣ್ಣಿನ ಗಮಲಿನಲ್ಲಿ‌
ಹುಟ್ಟಿ ಬೆಳೆದೊಂದರಳೆಯ ಈ ದಾರ
ಕೊಬ್ಬಿ  ಬೊಬ್ಬಿರಿಯುತ್ತಿದೆ  ಗರ ಗರಾ
ಅದಕ್ಕೀಗ  ಕೊಳಕು ಮಂಡಲದ ಹಲ್ಲು
ಊರಾಚೆ ಗುಡಿಸಲ ಸುಟ್ಟು ಮೆರೆಯುವ
ಬೆಂಕಿ ಪರ್ವತದ ಚೆಲ್ಲು

ಎಂದಾದರೊಂದು ದಿನ
ಕೊಳೆಯಲೇಬೇಕಲ್ಲ
ಈ ದಾರ
ಎದೆ ಭಾರ
ಗಂಡಿನುಡುದಾರ ಅಹಂಕಾರ
ನಡು ನಡುಗಿ ಹುಡುಗಿ ಬೆಂಕಿಗಾಹಾರ
ಕೊಲೆಗಾರ

ತುಂಡರಸಿ ಬೀಳುತ್ತಿದೆ ನೋಡಯ್ಯ
ಮುಗಿಲ ಪರ್ವತದ ಕುತ್ತಿಗೆ
ಒತ್ತೆ ಬಿದ್ದೆದ್ದು ಅಸ್ಥಿಪಂಜರವಾದರಯ್ಯಾ
ಅಜ್ಜ ಮುತ್ತಜ್ಜರು ತೊತ್ತಿಗೆ

ಒಡೆದೆಸೆದು ನೆತ್ತಿ
ಬಿರಿದ ಮಡಕೆಯ ನೇಯುತ್ತಿದೆ ನೂಲು ನೋಡು
ಬೇಯುತ್ತಿದೆ ಎದೆ ಹಾಲು
ಹೊಕ್ಕುಳ ಒಳಗಣ್ಣು ಕೀವು
ಹೊಕ್ಕಿ ಬಂದರಯ್ಯಾ
ಬುದ್ದ ಬಸವ ಅಂಬೇಡ್ಕರರು
ನೋವು ನೇಯ್ದ ಬಲೆ ಜಾಡ ಹಿಡಿದು

ಒತ್ತಿದ್ಯಾರು‌ ಹೇಳು ನೆತ್ತರ ನರ ಬತ್ತಿ?
ಬಿತ್ತಿದ್ಯಾರು‌ ಇವನಾರವೆಂಬ  ವಿಷದ ತತ್ತಿ?

ದುರದುರನೆ ಸುತ್ತಿ
ಲೋಕವೆಂಟು
ಹುಡುಕಿದರೆ ದೊರೆತಿತ್ತು
ಈ‌ ನೆಲದ ‌ಆ ನೆಲದ
ನೆಲದ ಒಳಗಿನ ನೆಲದ
ದುಃಖಕ್ಕೆಲ್ಲಕೆ ಮೂಲ
ನಿನ್ನದೀ  ಅಹಂಕಾರ
ಎದೆ ಭಾರ ಈ ದಾರ
ಹೋಗೆ ಹೋದವಯ್ಯಾ ಅಜ್ಜಂದಿರ‌ ಅಕ್ಷಾರ
ಎತ್ತಾದರಯ್ಯಾ ತೊತ್ತಾದರಯ್ಯಾ
ಬೆಂಡು ಬತ್ತಾಸು ತುತ್ತೂರಿ  ಬರೆ ಹೊರುವ
ಕೆರವಾದರಯ್ಯಾ

ಕಿವಿ ಇಟ್ಟು ನೋಡು ನೆಲಕೆ
ಬರಿ ದುಃಖ  ಬಿರಿ‌ ಬಿಕ್ಕ
ಬುದ್ಧ ಭಿಕ್ಕುಗಳಿಲ್ಲಿ
ದೇವರಲ್ಲ!

ನೆತ್ತರಿಗೆ, ವೀರ್ಯಕ್ಕೆ
ತಾಯೊಡಲ ತತ್ತಿಗೊಂದು ಕುತ್ತಿಗೆ ಸಿಕ್ಕರು ಸಾಕು
ಏರುತ್ತದೆ ದಾರ
ಗೋಣು ಕೊಯ್ಯುವ ಹಾರ
ಕುತ್ತಿಗೆ ತಗ್ಗಿಸಿ
ಕಿತ್ತೆಸೆದ ಗುರು
ನಾಡನಾಯಕನಾದ

ಕಡೆಗೋಲು‌ ಸಿಕ್ಕೀತೇನು
ಕುಡುಗೋಲು‌ ಹಿಡಿದ ಹುಡುಗಾ?

-ಡಾ.ವೆಂಕಟೇಶ ನೆಲ್ಲುಕುಂಟೆ, ಬೆಂಗಳೂರು
—–