ಮೃದು ಮನ
ಕದಡದಿರಿ ಮನವ ಕದಡದಿರಿ
ದ್ವೇಷ , ವೈಷಮ್ಯ ಮಾತ್ಸರ್ಯಗಳ
ಹುಚ್ಚು ಕಲ್ಪನೆ ಒಳ ಬಿತ್ತಿ
ಮೃದು ಮನವನೆಂದೂ ಕದಡದಿರಿ.
ಮನವೊಂದು ಜೀವ ಹಂದರ
ಜಾತಿ ಧರ್ಮಗಳ ತೇಪೆ ಹಾಕದಿರಿ
ಮತೀಯ ಭ್ರಾಂತಿಗೆ ಹರಿದು ದಾರ
ಕರುಣೆಯ ಕೊಲೆ ಮಾಡದಿರಿ.
ಮನವೊಂದು ಸುಂದರ ಕನ್ನಡಿ
ಕಲ್ಲೆಸೆದು ಚೂರು ಮಾಡದಿರಿ
ನೂರು ನೋಟ , ಭಾವ ಮೂಡಿ
ಕೆರಳಿ ಕೊರಗುವಂತೆ ಮಾಡದಿರಿ.
ಮನವೊಂದು ಸುಂದರ ವನ
ಕಸ ಕಡ್ಡಿ , ಕೊಳಕು ಚೆಲ್ಲದಿರಿ
ಹಸಿರ ಸಿರಿಯಲಿ ನಲಿವ ಜೀವನ
ತಿಪ್ಪೆಯಲಿ ನೆಲೆಸುವಂತೆ ಮಾಡದಿರಿ.
ಮನವೊಂದು ತಿಳಿ ನೀರ ಒರತೆ
ಕಾಲಾಡಿಸಿ ರಾಡಿ ಎಬ್ಬಿಸದಿರಿ
ತಂದು ನೂರು ರೋಗ ರುಜಿನ
ನರಳಿ ಸಾಯುವಂತೆ ಮಾಡದಿರಿ.
ಮನವೊಂದು ಶುದ್ಧ ಹಾಲಿನಂತೆ
ಹುಳಿಯನೆಂದೂ ಹಿಂಡದಿರಿ
ಮನ ಒಡೆದು ಭಿಕಾರಿಯಂತೆ
ಬೀದಿಯಲಿ ತಿರುಗುವಂತೆ ಮಾಡದಿರಿ.
ಮನವೊಂದು ಸ್ನೇಹ ಬಟ್ಟಲು
ಕಟ್ಟಲು ಕುಂಬಾರನಿಗೆ ವರುಷದಂತೆ
ಕ್ಷಣ ಸಾಕು ಮನ ಮಣ್ಣು ಪಾಲಾಗಲು
ದೊಣ್ಣೆಗೆ ನಿಮಿಷದಂತೆ.
ಮನವೊಂದು ದೇವ ಮಂದಿರ
ಇರಲಿ ಎಂದೆಂದೂ ಪ್ರಶಾಂತ
ಪ್ರೀತಿಸಿ ಆರಾಧಿಸಿ ಮನ ಮನಗಳ
ಚೆಲ್ಲಿ ಘಮಭರಿತ ಮಲ್ಲೆ ಹೂಗಳ.
-✍🏻 ಡಾ. ಮಹೇಂದ್ರ ಕುರ್ಡಿ, ಹಟ್ಟಿ ಚಿನ್ನದ ಗಣಿ, ರಾಯಚೂರು ಜಿ.