ವಿಶ್ವ ಕಾವ್ಯ ದಿನದ ಶುಭಾಶಯಗಳು
ಕವಿ ಮತ್ತು ಕವಿತೆ
ಬಿರು ಬಿಸಿಲಿನ ಸೂತಕದ
ಖಾಲೀ ಕಣ್ಣಿನ ಮುಗಿಲು ;
ಮಾತು ಮರೆತ ಮರದ ಹಕ್ಕಿಗಳ
ಬಿಕ್ಕಳಿಕೆ ಬರೆ ದುಗುಡ ದಿಗಿಲು.
ಹೆರಳು ಹೆಣೆಯುತಿರುವ
ಚಡಪಡಿಕೆಯ ಕೈ ಬೆರಳು; ಮಣ್ಣ
ದಾರಿಯ ಮೇಲೆ ತೂಗುವ ತೆಂಗಿನ ಗರಿ ನೆರಳು.
ಎಳೆದುಟಿಯಂಚಿನಲಿ ಉಂಡು
ಉಳಿದ ಹನಿ ಹಾಲು;
ಹಳೆಯ ಪುಸ್ತಕ ದ ತಿಳಿ ಹಳದಿ ಎಲೆ
-ಹಾಳೆ ಯ ಮೇಲೆ ಹನಿ ಗಣ್ಣು ಕವಿತೆ ಸಾಲು.
ಜೀವ ಜಾತ್ರೆಯ ತೇರು ಎಳೆದು
ಸುತ್ತಿಟ್ಟ ಹಗ್ಗ;
ನುಡಿಸಿ ಮುಚ್ಚಿಟ್ಟ ವೀಣೆಯಲಿ ತುದಿ
ಬೆರಳು ಕಂಪನ.
ಊರೆಲ್ಲ ಮಲಗಿದ ವೇಳೆ
ಖಾಲಿ ಪಾತ್ರೆಯಲಿ ಸೌಟು
ತಿರು ತಿರುಗಿಸಿ ಹುಡುಕಿ ನೋಡುತ್ತಿದ್ದಾಳೆ
ಅವ್ವ ;
ಮಕ್ಕಳುಂಡ ಮೇಲೆ ತನಗೆ ಏನಾದರೂ
ಮಿಕ್ಕಿ ಉಳಿಯಿತೆ ?
ನೂರು ದುಃಖಗಳ ತಾಯಿ ಗಾಂಧಾರಿ -ಕವಿತೆ.
ಒಲೆಯ
ನಿಗಿ ನಿಗಿ ಕೆಂಡ ಉರಿದು
ಉಳಿದ ಬೂದಿ ಕಿರೀಟದ – ಕವಿ.
-ಎಲ್ವಿ, ಬೆಂಗಳೂರು
—–